ಬೆಂಗಳೂರು, ಜು.15: ಮುಂದಿನ ಜ.15ರ ಒಳಗೆ 150 ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಗರದ ಜೆಪಿ ಭವನದಲ್ಲಿ ಜಿಲ್ಲಾವಾರು ಸಭೆಗಳಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯ ನಡವಳಿಕೆಗಳನ್ನು ಜನರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಪ್ರಾದೇಶಿಕ ಪಕ್ಷಕ್ಕೆ ಒಲವು ತೋರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂಬರುವ ಚುನಾವಣೆಯಲ್ಲಿ 150-170 ಸ್ಥಾನಗಳಲ್ಲಿ ಗೆಲುವು ಆದರೂ ಆಗಬಹುದು. ಒಟ್ಟಾರೆ ಸ್ವಂತ ಬಲದಿಂದ ಜೆಡಿಎಸ್ ಅಧಿಕಾರಕ್ಕೆ ಬರಬೇಕೆಂದು ಸಮಗ್ರ ಕರ್ನಾಟಕದ ಅಭಿವೃದ್ಧಿಯ ಚಿತ್ರಣವನ್ನು ಜನರ ಮುಂದಿಟ್ಟು 5 ವರ್ಷ ಸ್ವತಂತ್ರ ಸರ್ಕಾರವನ್ನ ಪ್ರಾದೇಶಿಕ ಪಕ್ಷಕ್ಕೆ ನೀಡಿ ಎಂದು ಜನರಲ್ಲಿ ಮನವರಿಕೆ ಮಾಡಲಾಗುವುದು. ಆ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು.
ನಮ್ಮ ಪಕ್ಷ ಸದಾ ಜನರ ಸಮೀಪದಲ್ಲೇ ಇದೆ ಎಂದು ಹೇಳಿದರುವೆ
ರಾಷ್ಟ್ರೀಯ ಪಕ್ಷಗಳು ರಾಜ್ಯ ಉಸ್ತುವಾರಿಗಳನ್ನು ನೇಮಕ ಮಾಡುವ ಉದ್ದೇಶವೇ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಬೇರೆ ರಾಜ್ಯದ ಚುನಾವಣೆಗೆ ಬಳಸುವುದು ಎಂದು ಅವರು ಆರೋಪಿಸಿದರು.
ಬಿಜೆಪಿಯವರು 10 ವರ್ಷ ಸರ್ಕಾರ ಮಾಡುತ್ತೇವೆಂದು ಹೇಳುತ್ತಾರೆ. 2008ರಲ್ಲೂ ಇದೇ ಮಾತು ಹೇಳಿದ್ದರು. ನಂತರ ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊನೆ ಚುನಾವಣೆ ಎಂದು ಹೇಳಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸಿದರು. ಮತ್ತೆ ಕನಸು ಕಾಣಲು ಸ್ವತಂತ್ರವಾಗಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನಿತ್ಯ ಒಬ್ಬರು ಮುಖ್ಯಮಂತ್ರಿಯಾಗುವ ಹೆಸರನ್ನು ಹೇಳುತ್ತಿದ್ದಾರೆ. ರಾಜ್ಯ ಉಸ್ತುವಾರಿ ಹೊತ್ತವರು ಕಾಂಗ್ರೆಸ್ನ ಪರಿಸ್ಥಿತಿ ನೋಡಿ ಬೇರೊಂದು ರಾಜ್ಯದ ಉಸ್ತುವಾರಿ ಕೊಡಿ ಎಂದಿದ್ದಾರೆ ಎಂದು ಟೀಕಿಸಿದ ಅವರು, ರಾಷ್ಟ್ರೀಯ ಪಕ್ಷಗಳು ಜನರಿಗೆ ಟೋಪಿ ಹಾಕಿವೆ. ರಾಷ್ಟ್ರೀಯ ಪಕ್ಷಗಳಿಂದ ಪೆಟ್ಟು ತಿಂದಿರುವ ಜನರು ಮರು ಚಿಂತೆನೆ ಮಾಡುತ್ತಿದ್ದಾರೆ. ಜನತಾ ದಳ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಹೆಚ್ಚು ಅಭಿವೃದ್ಧಿಯಾಗಿzದಿ ಅದೇರೀತಿ ದೇಶಕ್ಕೆ ಮಾದರಿಯಾದ ಆಡಳಿತ ನೀಡುವ ಉದ್ದೇಶವಿದೆ ಎಂದು ಹೇಳಿದರು.
ಮುಂದಿನ 2 ವರ್ಷದಲ್ಲಿ ಏನೇನು ಆಗುತ್ತದೆ ಎಂದು ಕಾದು ನೋಡಬೇಕು. ಕೋವಿಡ್ ಅನಾಹುತ, ಶಿಕ್ಷಣ ಕ್ಷೇತ್ರ ಸುಧಾರಣೆ, ಕೃಷಿ ಕಾರ್ಯಕ್ರಮ, ಉದ್ಯೋಗ ಸೃಷ್ಟಿ, ಮನೆ ನಿರ್ಮಾಣದಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡುವ ಭರವಸೆಯೊಂದಿಗೆ ಜನರ ವಿಶ್ವಾಸ ಗಳಿಸುತ್ತೇವೆ. ಪ್ರಾದೇಶಿಕ ಪಕ್ಷದ ಅನಿವಾರ್ಯತೆಯನ್ನ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಆಷಾಡದ ನಂತರ ಪಕ್ಷ ಸಂಘಟನೆಗಾಗಿ ಜಿಲ್ಲಾವಾರು ಪ್ರವಾಸ ಹಮ್ಮಿಕೊಳ್ಳುತ್ತೇವೆ. ಇಂದಿನಿಂದ ಒಂದುವಾರ ಸರಣಿ ಸಭೆ ನಡೆಸುವ ಮೂಲಕ ಪದಾಧಿಕಾರಿಗಳ ನೇಮಕ, ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ಕುರಿತು ಚರ್ಚಿಸುವುದಾಗಿ ಹೇಳಿದರು.
ಮೇಕೆ ದಾಟು ಬಗ್ಗೆ ಚರ್ಚಿಸಿಲ್ಲ ಕೇಂದ್ರ ಜನಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರು ರಾಜ್ಯಕ್ಕೆ ಬಂದು ಚರ್ಚೆಮಾಡಿದ್ದು ಜಲ ಮಿಷನ್ ಯೋಜನೆ ಬಗ್ಗೆಯೇ ಹೊರತು ಮೇಕೆದಾಟು, ಮಹಾದಾಯಿ ಯೋಜನೆಗಳ ಬಗ್ಗೆ ಅಲ್ಲ ಎಂದು ಹೇಳಿದ ಕುಮಾರಸ್ವಾಮಿ ಅವರು, ಗ್ರಾಮೀಣ ಅಭಿವೃದ್ಧಿ ಇಲಾಖೆಯಡಿ ಜಲಶಕ್ತಿ ಮಿಷನ್ ಯೋಜನೆ ಮೂಲಕ 91 ಲಕ್ಷ ಕುಟುಂಬಗಳಿಗೆ ಕುಡಿವ ನೀರು ಒದಗಿಸುವ ಗುರಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿಯಾಗಿಲ್ಲ ಎಂದಿದ್ದಾರೆ. ಈ ಸಭೆಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರೇ ಹೋಗಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇದು ನಿದರ್ಶನ. ಕೇಂದ್ರ ಸಚಿವರು ಬಂದಾಗ ಜಾಹೀರಾತು ಮೂಲಕ ರಾಜ್ಯದ ಪ್ರಗತಿಯನ್ನು ತೋರಿಸಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.