ಮೈಸೂರು: ಕೆಆರ್ಎಸ್ ಅಣೆಕಟ್ಟು ಕನ್ನಡಿಗರ ಅಸ್ಮಿತೆ ಹಾಗಾಗಿ ಕೂಡಲೇ ತಜ್ಞರ ತಂಡ ಕಳುಹಿಸಿ, ಅಣೆಕಟ್ಟು ಎಲ್ಲವನ್ನೂ ಪರಿಶೀಲನೆ ನಡೆಸಿ,ಅಣೆಕಟ್ಟು ಬಿರುಕು ಬಿಟ್ಟಿದೆಯಾ, ಸುರಕ್ಷಿತವಾಗಿದೆಯೇ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ತಜ್ಞರು ಹೇಳಬೇಕು. ಆದರೆ ಈ ವಿಚಾರವಾಗಿ ರಾಜಕೀಯ ಮಾಡುವುದು ಬೇಡ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಆರ್ಎಸ್ ಅಣೆಕಟ್ಟೆ ಕಟ್ಟಿದ್ದರೆ ಈಗಾಗಲೇ ಬಿದ್ದು ಹೋಗುತ್ತಿತ್ತು. ರಾಜಪ್ರಭುತ್ವದಲ್ಲಿ ನಿರ್ಮಾಣ ಮಾಡಿರುವುದಕ್ಕೆ ಇನ್ನೂ ಚೆನ್ನಾಗಿದೆ. ಅದರೊಂದಿಗೆ ನಮಗೆ ಭಾವನಾತ್ಮಕ ಸಂಬಂಧ ಇದೆ ಎಂದರು.
ಕೆಆರ್ಎಸ್ ವಿಚಾರವಾಗಿ ಇಷ್ಟೊತ್ತಿಗೆ ಸಿಎಂ ಅವರೇ ಸ್ಪಷ್ಟನೆ ನೀಡಿ, ಜನರ ಆತಂಕ ನಿವಾರಣೆ ಮಾಡಬೇಕಿತ್ತು. ಆದರೆ, ಅವರು ಸುಮ್ಮನಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಕೆಆರ್ಎಸ್ ಅಣೆಕಟ್ಟು ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಅದನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.