ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು:ಏ-6: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಕಡಿಮೆ ಇದ್ದಾಗಲೂ ನಮ್ಮ ದೇಶದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ ಕಡಿಮೆಯಾಗಲಿಲ್ಲ. ಹಿಂದಿನ ಯುಪಿಎ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಆದರೆ, ಈಗ ಇಲ್ಲ. ಇದರಿಂದ ಕೇಂದ್ರ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಉಳಿತಾಯ ಆಗುತ್ತಿದೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕಲ್ಲವೇ ?

ತಾನು ದರ ಕಡಿಮೆ ಮಾಡದೇ ರಾಜ್ಯ ಸರ್ಕಾರಗಳ ಮೇಲೆ ಜವಾಬ್ದಾರಿ ಹೊರಿಸುವುದೇಕೆ ? ಎಂದು ಮುಖ್ಯಮಟ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.ರಾಜ್ಯ ಸರ್ಕಾರ ಈ ಹಿಂದೆಯೂ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ಅಬಕಾರಿ ಸುಂಕ ವಸೂಲಿ ಮಾಡುತ್ತಿತ್ತು. ಈಗಲೂ ಮಾಡುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 130 ರೂ. ಇತ್ತು. ಈಗ ಸುಮಾರು 50 ರೂ.ಗಳಾಗಿದೆ. ಆಗ ಪೆಟ್ರೋಲ್ ಬೆಲೆ ಲೀಟರ್ ಗೆ 75 ರೂ. ಇತ್ತು. ಈಗ 75. ರೂ. ಆಗಿದೆ. ಆದರೆ, 35 ರೂ.ಗಳಿಗೆ ಪೆಟ್ರೋಲ್ ಮಾರಾಟ ಆಗಬೇಕಿತ್ತು.

ಕೇಂದ್ರ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಗುಡುಗಿದ್ಲಿ ಅವ್ರರು, ದಲಿತರ ಮೇಲಿನ ದೌರ್ಜನ್ಯ ಕಾಯಿದೆಯನ್ನು ದುರ್ಬಲಗೊಳಿಸುವ ಪ್ರಯತ್ನವಾದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ನ್ಯಾಯಾಲಯದಲ್ಲಿಯೂ ಪರಿಣಾಮಕಾರಿಯಾಗಿ ಹೋರಾಟ ನಡೆಸಿಲ್ಲ. ಕಾಯ್ದೆ ತಿದ್ದುಪಡಿಗೂ ಮುಂದಾಗಲಿಲ್ಲ.

ಕಾಯಿದೆ ಒಂದು ಬಾರಿ ದುರ್ಬಲವಾದರೆ ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಮಾಡಲಾಗದು. ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವರೆಗೂ ಒಂದು ಹೇಳಿಕೆಯನ್ನೂ ಕೊಟ್ಟಿಲ್ಲ. ಪ್ರತಿಭಟನೆಗಳಲ್ಲಿ 9 ಮಂದಿ ದಲಿತರು ಸಾವಿಗೀಡಾದರೂ ಪ್ರತಿಕ್ರಿಯೆ ಇಲ್ಲ. ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಹಿತ ಕಾಯುವಲ್ಲಿ ಕೇಂದ್ರ ವಿಫಲವಾಗಿದೆ.

ಮೂರು ದಿನಗಳ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ವೇಳೆ ಬೆಂಬಲಿಗರ ಮನೆಗೆ ಊಟಕ್ಕೆ ಹೋಗಿದ್ದೆ. ಊಟ ಮಾಡಿ ಕುಳಿತಿದ್ದಾಗ ಕುರ್ಚಿ ಕುಸಿದು ತಲೆ ಶೋಕೇಸ್ ಗೆ ತಗುಲಿತು. ಅಷ್ಟಕ್ಕೆ ಕುರ್ಚಿಯಿಂದ ಬಿದ್ದ ಸಿಎಂ ರಾಜಕೀಯದಲ್ಲಿಯೂ ಬೀಳುತ್ತಾರೆ ಎಂಬ ವ್ಯಾಖ್ಯಾನ ಶುರುವಾಯಿತು. ಇಂತಹ ಮೂಢ ನಂಬಿಕೆಗೆ ಏನು ಹೇಳುವುದು ?

ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂದರು. 10-12 ಬಾರಿ ಹೋಗಿ ಬಂದೆ. ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಿಲ್ಲವೇ ?
ನನ್ನ ಕಾರಿನ ಮೇಲೆ ಕಾಗೆ ಕುಳಿತಾಗಲೂ ಭಾರಿ ಚರ್ಚೆ ನಡೆಯಿತು.‌ ಬಜೆಟ್ ಮಂಡಿಸುವುದೇ ಇಲ್ಲ ಎಂದರು. ಬೇರೆಯವರ ಟೀಕೆಗಳೇ ನನಗೆ ಪ್ಲಸ್ ಪಾಯಿಂಟ್.

ಕಾವೇರಿ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು 12ರಂದು ರಾಜ್ಯ ಬಂದ್ ಗೆ ಕರೆ ನೀಡಿವೆ. ಇದರಿಂದ ಜನರಿಗೆ ತೊಂದರೆ ಆಗುತ್ತದೆ. ಪ್ರತಿಭಟನೆಯನ್ನು, ಸಿಟ್ಟನ್ನು ಬೇರೆ ರೂಪದಲ್ಲಿಯೂ ವ್ಯಕ್ತಪಡಿಸಬಹುದು. ಬಂದ್ ಅಗತ್ಯವಿಲ್ಲ ಎಂದು ಕನ್ನಡಪರ ಸಂಘಟನೆಗಳ ಮುಖಂಡರಿಗೆ ಮನವಿ ಮಾಡುತ್ತೇನೆ.

ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದು. ಮೂರೇ ತಿಂಗಳಲ್ಲಿ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಯುತ್ತದೆ ಎಂಬುದು ಪ್ರತಿಪಕ್ಷಗಳ ಭ್ರಮೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ. ಜೆಡಿಎಸ್ ಸ್ಥಾನಗಳ ಸಂಖ್ಯೆ 25ರಿಂದ 30ಕ್ಕೆ ಸೀಮಿತವಾಗಲಿದೆ.

ಜನತಾ ಪರಿವಾರದ ಎಲ್ಲ ನಾಯಕರು ಒಂದಾಗಿದ್ದಾಗ ಜೆಡಿಎಸ್ ಗೆ 59 ಸ್ಥಾನಗಳು ಬಂದಿತ್ತು. ನಾಯಕರು ಒಬ್ಬೊಬ್ಬರಾಗಿ ಬಿಟ್ಟ ಮೇಲೆ 28ಕ್ಕೆ ಇಳಿಯಿತು. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಗಳಿಸಿದ ಸ್ಥಾನಗಳ ಸಂಖ್ಯೆ 40. ಅದರಲ್ಲಿ 11 ಮಂದಿ ಪಕ್ಷ ತೊರೆದಿದ್ದಾರೆ. ನಾನು ಆ ಪಕ್ಷದ ಅಧ್ಯಕ್ಷ ಆಗಿದ್ದವನು. ಹೀಗಾಗಿ ಜೆಡಿಎಸ್ ಶಕ್ತಿ ಎಲ್ಲೆಲ್ಲಿ ಇದೆ ಎಂಬುದು ನನಗೆ ಗೊತ್ತಿದೆ.

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಚುನಾವಣೆಗೆ ಹೋದಾಗಲೇ ಜೆಡಿಎಸ್ ಗೆ ಬಂದ ಸ್ಥಾನಗಳ ಸಂಖ್ಯೆ 28. ದೇವೇಗೌಡರು, ಕುಮಾರಸ್ವಾಮಿಯವರೇ ಹೇಳುವಂತೆ ಮುಖ್ಯಮಂತ್ರಿಯಾಗಿ ಅವರು ಒಳ್ಳೆಯ ಕೆಲಸ ಮಾಡಿದ್ದರೆ ಸ್ಥಾನಗಳ ಸಂಖ್ಯೆ 59ರಿಂದ 28ಕ್ಕೆ ಕುಸಿದದ್ದು ಏಕೆ ?

ಮುಖ್ಯಮಂತ್ರಿಯಾದರೆ ಮುಂದೆ ಒಳ್ಳೆಯ ಕೆಲಸ ಮಾಡುವುದಾಗಿ ದೇವೇಗೌಡರು, ಕುಮಾರಸ್ವಾಮಿಯವರು ಹೇಳುತ್ತಿದ್ದಾರೆ. ಆದರೆ, ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂಬುದು ಮುಖ್ಯ.

ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವುದು ಖಚಿತ. ಈ ಕ್ಷೇತ್ರ ನನಗೆ ಸುರಕ್ಷಿತ ಅಲ್ಲ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನಾನು ಎಂಟನೇ ಬಾರಿಗೆ ಕಣಕ್ಕಿಳಿಯುತ್ತಿದ್ದೇನೆ ಎಂದು ಹೇಳಿದರು.

Mysore,CM Siddaramaiah

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ