ಬೆಂಗಳೂರು: ಇಡೀ ನಾಡಿನ ರಾಜ್ಯಾಡಳಿತದ ದಿಕ್ಸೂಚಿಯಂತಿರುವ ವಿಧಾನಮಂಡಲ ಅವೇಶನದ ರೂಪುರೇಷೆ ಸಿದ್ಧಪಡಿಸಲು ಆಡಳಿತಾರೂಢ ಬಿಜೆಪಿಗೆ ಪ್ರತಿಪಕ್ಷ ಕಾಂಗ್ರೆಸ್ ಅಸಹಕಾರ ಕೊಡಲು ಶುರು ಮಾಡಿದೆ.
ಸದನವನ್ನು ಹೇಗೆ ನಡೆಸಬೇಕೆಂಬ ರೂಪುರೇಷೆ ಸಿದ್ಧಗೊಳ್ಳುವ ಕಾರ್ಯಕಲಾಪಗಳ ಸಲಹಾ ಸಮಿತಿ (ಬಿಎಸಿ) ಸಭೆ ಬಹಿಷ್ಕರಿಸುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಮೊಂಡಾಟ ಮುಂದುವರಿಸಿದೆ. ಹೀಗಾಗಿ ಶುಕ್ರವಾರ ನಡೆಯಬೇಕಿದ್ದ ಬಿಎಸಿ ಸಭೆಯು ಸೋಮವಾರಕ್ಕೆ ಮುಂದೂಡಿಕೆಯಾಗಿದೆ.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಸಮಾವೇಶಗೊಳ್ಳಬೇಕಿತ್ತು. ಇದಕ್ಕೂ ಮೊದಲು ಅಂದರೆ, ಬೆಳಗ್ಗೆ 10 ಗಂಟೆಗೆ ಬಿಎಸಿ ಸಭೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿಗದಿಪಡಿಸಿದ್ದರು.
ಆದರೆ, ಬಿಎಸಿಗೆ ಬರುವುದಿಲ್ಲ ಎಂದು ವಿರೋಧ ಪಕ್ಷದ ಕಾಂಗ್ರೆಸಿಗರು ಹಠ ಹಿಡಿದಿದ್ದರಿಂದ ಸ್ಪೀಕರ್ ಮತ್ತು ಸಿಎಂ ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.
ಹಿಂದಿನ ಅವೇಶನದ ಸಂದರ್ಭದಲ್ಲಿ ನಡೆದಿದ್ದ ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ಕಾಯ್ದೆ ಮಂಡಿಸುವ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಯಾವ ಮಾಹಿತಿಯೂ ಇಲ್ಲದೆಯೇ ವಿಧಾನಸಭೆಯಲ್ಲಿ ಮಂಡಿಸಿದ್ದು ಸರಿಯಲ್ಲ. ಬಿಎಸಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ವಿರುದ್ಧವಾಗಿ ಆಡಳಿತ ಪಕ್ಷ ನಡೆದುಕೊಂಡಿದೆ. ಬಿಎಸಿ ಸಭೆಗೆ ಘನತೆಯೇ ಇಲ್ಲದಂತಾಗಿದೆ. ಹೀಗಿರುವಾಗ ಸಭೆ ನಡೆಸಿ ಪ್ರಯೋಜನವಿಲ್ಲ. ಹೀಗಾಗಿ ನಾವು ಸಭೆಗೆ ಬರುವುದಕ್ಕೆ ಸಮ್ಮತವಿಲ್ಲ ಎಂದು ಪುನರುಚ್ಚರಿಸಿದರು.
ಹಿಂದಿನ ಸದನದಲ್ಲಿ ಹೆಚ್ಚಿನ ಸಮಯಾವಕಾಶ ಇಲ್ಲದ್ದರಿಂದ ಬಿಎಸಿಯಲ್ಲಿ ಮಸೂದೆ ಮಂಡನೆ ಬಗ್ಗೆ ಚರ್ಚಿಸಲಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದರೂ ಪ್ರತಿಪಕ್ಷ ಮಾತ್ರ ತನ್ನ ಪಟ್ಟು ಸಡಿಲಿಸಲಿಲ್ಲ.
ಫೆ.1ರ ಸೋಮವಾರ ಬೆಳಗ್ಗೆ 10 ಗಂಟೆಗೆ ಬಿಎಸಿ ಸಭೆ ನಡೆಸಲು ನಿರ್ಧರಿಸಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದರು.