ಹೊಸದಿಲ್ಲಿ: ಒಂದೂವರೆ ವರ್ಷಗಳ ಕಾಲ ಮೂರು ಹೊಸ ಕೃಷಿ ಕಾಯ್ದೆಗಳನ್ನು ಅಮಾನತುಗೊಳಿಸುವ ಕೇಂದ್ರದ ಪ್ರಸ್ತಾಪವನ್ನು ರೈತ ನಾಯಕರು ತಿರಸ್ಕರಿಸಿರುವ ಹಿನ್ನೆಲೆ ಶುಕ್ರವಾರ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ನಡೆದ 11ನೇ ಸುತ್ತಿನ ಮಾತುಕತೆಯಲ್ಲೂ ಕೃಷಿ ಕಾಯ್ದೆಗಳಿಗೆ ಸಂಬಂಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಇದೇ ವೇಳೆ ಮುಂದಿನ ಸಭೆಯ ದಿನಾಂಕವನ್ನೂ ನಿಗದಿಗೊಳಿಸಲಾಗಿಲ್ಲ.
ಚೆಂಡು ಈಗ ನಿಮ್ಮ ಭಾಗದಲ್ಲಿದೆ ಎಂದು ತಿಳಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರ ಮತ್ತು ದೇಶದ ಹಿತಾಸಕ್ತಿಯಿಂದಾಗಿ ನಮ್ಮ ಪ್ರಸ್ತಾಪವನ್ನು ಮರುಪರಿಗಣಿಸುವಂತೆ ಕೇಳಿದೆವು. ಆದರೂ ಅದಕ್ಕೆ ರೈತರು ಒಪ್ಪಲಿಲ್ಲ. ಈ ಬಗ್ಗೆ ನನಗೆ ದುಃಖವಿದೆ. ರೈತ ನಾಯಕರಿಗೆ ರೈತರ ಕಲ್ಯಾಣದ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಅವರ ಮಾತುಗಳಿಂದ ವ್ಯಕ್ತವಾಯಿತು ಎಂದಿದ್ದಾರೆ.