ಧಾರ್ಮಿಕ ಕ್ಷೇತ್ರವಾಗಿ ಶ್ರೀಗಳ ಹುಟ್ಟೂರು | ಅಭಿವೃದ್ಧಿಗಾಗಿ 80 ಕೋಟಿ ರೂ. ಮೀಸಲು: ಸಿಎಂ ದಾಸೋಹ ದಿನವಾಗಿ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ

ತುಮಕೂರು: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀಗಳಾಗಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ದಿನವಾದ ಜನವರಿ 21ನ್ನು ದಾಸೋಹ ದಿನವನ್ನಾಗಿ ಘೋಷಣೆ ಮಾಡಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತದೆ. ಬೆಂಗಳೂರಿಗೆ ಹೋದ ಕೂಡಲೇ ಈ ಘೋಷಣೆಗೆ ಅಗತ್ಯವಾದ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಸಿದ್ಧಗಂಗಾ ಕ್ಷೇತ್ರದಲ್ಲಿ ಸಿದ್ಧಗಂಗಾ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟನೆ, ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ಮಾಗಡಿ ತಾಲೂಕಿನ ವೀರಾಪುರದಲ್ಲಿ ಸರ್ಕಾರ ಯೋಜಿಸಿರುವ ಸ್ವಾಮೀಜಿ ಅವರ 111ಅಡಿ ಎತ್ತರದ ಪ್ರತಿಮೆ ಸ್ಥಾಪನೆ ಮತ್ತು ಗ್ರಾಮದ ಅಭಿವೃದ್ಧಿ ಕುರಿತ 3ಡಿ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿ, ಶ್ರೀಗಳ ಹುಟ್ಟೂರಾದ ನೆಲಮಂಗಲ ತಾಲೂಕಿನ ವೀರಾಪುರವನ್ನು ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಈಗಾಗಲೇ 80 ಕೋಟಿ ರೂ.ಯೋಜನೆ ಸಿದ್ಧಪಡಿಸಿದೆ. ಈಗಾಗಲೇ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೆಆರ್‍ಡಿಎಲ್ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ ಎಂದರು.
ವೀರಾಪುರದಲ್ಲಿ ಸುಂದರ ಉದ್ಯಾನವನ:
ವೀರಾಪುರದ ಗುಡ್ಡದಲ್ಲಿ ಶ್ರೀಗಳು ನಡೆದಾಡಿದ್ದಾರೆ. ಈ ಗುಡ್ಡವನ್ನು ಒಂದು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ಸುಂದರವಾದ ಉದ್ಯಾನ ನಿರ್ಮಾಣ, ಗುಡ್ಡದ ಮೇಲೆ ಶ್ರೀಗಳು 111 ವರ್ಷ ಜೀವಿಸಿದ ಕುರುಹುವಾಗಿ 111ಅಡಿ ಎತ್ತರದ ಶ್ರೀಗಳ ಪ್ರತಿಮೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಜಗಜ್ಯೋತಿ ಬಸವೇಶ್ವರರ ಕಾಯಕ ತತ್ವಕ್ಕೆ ಹೆಚ್ಚಿನ ಒತ್ತು ಕೊಟ್ಟವರು. ಅವರು ಶ್ರೀಮಠದಲ್ಲಿ ತ್ರಿವಿಧ ದಾಸೋಹ ಆರಂಭಿಸಿ ರಾಜ್ಯದ ಬಡಜನರಿಗೆ ಆಶ್ರಯದಾತರಾಗಿದ್ದರು. ಇಲ್ಲಿ ಸೇರಿದ ವಿದ್ಯಾರ್ಥಿಗಳಿಗೆ ಅನ್ನ, ಶಿಕ್ಷಣ,ಧಾರ್ಮಿಕ ದಾಸೋಹವನ್ನು ಉಣಬಡಿಸಿದವರು. ಇಲ್ಲಿ ಶಿಕ್ಷಣ ಪಡೆದ ಹಲವರು ಇಂದು ವಿಶ್ವದ ವಿವಿಧ ದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಶ್ರೀಗಳು ಒಂದು ವಿಶ್ವವಿದ್ಯಾಲಯವಾಗಿದ್ದರು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ