ಆತ್ಮ ನಿರ್ಭರ ಭಾರತ ದಿಸೆಯಲ್ಲಿ ಉತ್ತಮ ಹೆಜ್ಜೆ : ರಾಜ್ಯಪಾಲ ವಿ.ಆರ್. ವಾಲಾ ಕೋವಿಡ್ ಹೋರಾಟದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ

ಬೆಂಗಳೂರು: ಕೊವೀಡ್ ಸವಾಲನ್ನು ಜಗತ್ತು ಎದುರಿಸುತ್ತಿರುವಾಗ ನವ ಚೈತನ್ಯ ಮತ್ತು ಆಶೋತ್ತರಗಳೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆ ಇಟ್ಟಿದ್ದೇವೆ. ರಾಜ್ಯದ ಜನತೆಯೊಂದಿಗೆ ರಾಜ್ಯ ಸರ್ಕಾರ ಕೊವೀಡ್ ಅಲೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶದಲ್ಲಿಯೇ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.
ಮಂಗಳವಾರ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಕ್ರಮಗಳು ಉತ್ತಮವಾಗಿದ್ದು, ಕೊರೋನಾ ಎಂಬ ಶತ್ರುವಿನ ವಿರುದ್ಧದ ಜಯ ಇದಾಗಿದೆ. ಈ ಬಿಕ್ಕಟ್ಟಿನ ಅವಕಾಶವನ್ನು ನಮ್ಮ ಸಾಮಥ್ರ್ಯ ವೃದ್ಧಿಸಲು ಆರೋಗ್ಯ ಮೂಲ ಸೌಕರ್ಯ, ಪಿಪಿಇ ಕಿಟ್ ಹಾಗೂ ವೆಂಟಿಲೇಟರ್ ಉತ್ಪಾದನೆ ಹೆಚ್ಚಿಸಲು ಬಳಸಿಕೊಂಡಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ದಿಸೆಯಲ್ಲಿ ಉತ್ತಮ ಹೆಜ್ಜೆಯಾಗಿದೆ ಎಂದರು.
2020-21ನೇ ಸಾಲಿನಲ್ಲಿ ರಾಜ್ಯಸರ್ಕಾರವು ಜಲಾನಯನ ಅಭಿವೃದ್ಧಿಗಾಗಿ 170 ಕೋಟಿ ರೂ. ಬಜೆಟ್‍ನಲ್ಲಿ ಮೀಸಲಿರಿಸಿದೆ. ಇದರಿಂದ ಭೂ ರಹಿತ ಕಾರ್ಮಿಕರಿಗೆ ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉದ್ಯೋಗವಕಾಶ ದೊರೆಯಲಿದೆ. ಮೊಬೈಲ್ ಮತ್ತು ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ ಅಳವಡಿಕೆ ಮಾಡಲಾಗಿದೆ. ಇದರಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಸಹಾಯಧನ ಸುಗಮವಾಗಿ ದೊರೆಯಲಿದೆ. ಈ ಬಾರಿ ಮಹಿಳಾ ಕೇಂದ್ರಿತ ಬಜೆಟ್‍ಗೆ ಆದ್ಯತೆ ನೀಡಲಾಗಿದ್ದು, ಅಂಗನವಾಡಿಗಳು ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತೆಯರ ಮೂಲಕ ಗರ್ಭಿಣಿಯರಿಗೆ ಸೇವೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮಹಿಳಾ ಮೀಸಲಾತಿ ಹೆಚ್ಚಳ
ಪೊಲೀಸ್ ಪಡೆಯಲ್ಲಿ ಮಹಿಳಾ ಮೀಸಲಾತಿ ಶೇ.25ಕ್ಕೆ ಹೆಚ್ಚಳ ಮಾಡಲಾಗಿದೆ. ಸಬ್ ಇನ್‍ಸ್ಪೆಕ್ಟರ್ ನೇಮಕಾತಿಗೆ ವಯೋಮಿತಿ ಎರಡು ವರ್ಷ ಹೆಚ್ಚಳ ಮಾಡಲಾಗಿದೆ. ಪೊಲೀಸ್ ಗೃಹ 2025 ಯೋಜನೆಯಲ್ಲಿ 10 ಸಾವಿರ ಪೊಲೀಸ್ ವಸತಿಗೃಹ ನಿರ್ಮಾಣ ಕಾರ್ಯ ಆರಂಭವಾಗಿದೆ. ಅಗ್ನಿಶಾಮಕ ತುರ್ತು ಸೇವೆ ಇಲಾಖೆಯಲ್ಲಿ 1568 ಹುಧೆ ನೇಮಕಕ್ಕೆ ಅನುಮೋದನೆ ಸಿಕ್ಕಿದೆ. ರಾಜ್ಯದಲ್ಲಿ ನಾವೀನ್ಯ ಉತ್ತೇಜನೆಗೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಪ್ರಾರಂಭ ಮಾಡಲಾಗಿದೆ. ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25 ಅನುಷ್ಠಾನ ಮಾಡಲಾಗಿದೆ ಎಂದರು.
ಜೀವ ವೈವಿಧ್ಯ ನಿರ್ವಹಣ ಸಮಿತಿ ರಚನೆ
ಅರಣ್ಯ ಮತ್ತು ಜೀವ ಪರಿಸರ ಇಲಾಖೆಯಿಂದ ದೇಶದಲ್ಲಿ ಮೊದಲ ಬಾರಿಗೆ ಹಸಿರು ಸೂಚ್ಯಂಕ ಸಾಧನ ಕಿಟ್ ಅಭಿವೃದ್ಧಿಪಡಿಸುವ ಮೂಲಕ ಪರಿಸರ ಸಂರಕ್ಷಣೆಗಾಗಿ ಕ್ರಮಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಜೀವ ವೈವಿಧ್ಯ ನಿರ್ವಹಣ ಸಮಿತಿ ರಚನೆ ಮಾಡಲಾಗಿದೆ. ತೋಟಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಅದನ್ನು ಮತ್ತಷ್ಟು ಸುಧಾರಿಸಲು 701 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಲ್ಲದೆ, 15,905 ಹೆಕ್ಟೇರ್ ಪ್ರದೇಶವನ್ನು ಆಧುನಿಕ ನೀರಾವರಿ ವ್ಯವಸ್ಥೆಯಲ್ಲಿ ತರಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ