ಹೊಸದಿಲ್ಲಿ: ಪಾಕಿಸ್ಥಾನ ಮೂಲದ ಲಷ್ಕರ್-ಎ-ತಯ್ಯಿಬಗೆ ವಿದೇಶಿ ಭಯೋತ್ಪಾದಕ ಸಂಸ್ಥೆ (ಎಫ್ಟಿಒ)ಎಂಬ ಹಣೆಪಟ್ಟಿಯನ್ನು ಪರಿಶೀಲಿಸಿದ ಅಮೆರಿಕ ಆಡಳಿತವು ಅದನ್ನು ಹಾಗೆಯೇ ಮುಂದುವರಿಸಿದೆ. ಮುಂದಿನ ತಿಂಗಳು ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಸಭೆ ನಡೆಯಲಿದ್ದು, ಪಾಕಿಸ್ಥಾನಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಈ ಹಿಂದೆ 2001ರ ಡಿಸೆಂಬರ್ನಲ್ಲಿಯೇ ಅಮೆರಿಕ ಲಷ್ಕರ್-ಎ-ತಯ್ಯಿಬ ಸಂಘಟನೆಗೆ ಮೊದಲ ಬಾರಿಗೆ ಭಯೋತ್ಪಾದಕ ಗುಂಪು ಎಂಬ ಹಣೆ ಪಟ್ಟಿಯನ್ನು ನೀಡಿತ್ತು. ಈಗ ತಾನು ನೀಡಿದ್ದ ಹುದ್ದೆಯನ್ನು ಪರಿಶೀಲಿಸಿದ ಅಮೆರಿಕ ಮತ್ತೆ ಲಷ್ಕರ್-ಎ-ತಯ್ಯಿಬ ಸೇರಿದಂತೆ ಪಾಕಿಸ್ಥಾನ ಮೂಲದ ಲಷ್ಕರ್-ಐ-ಝಂಗ್ವಿ ಸೇರಿದಂತೆ ಇತರೆ 7 ಸಂಘಟನೆಗಳಿಗೆ ನೀಡಲಾಗಿರುವ ಎಫ್ಟಿಒ ಗುರುತನ್ನು ಯಥಾಸ್ಥಿತಿ ಉಳಿಸಿಕೊಂಡಿರುವುದಾಗಿ ತಿಳಿಸಿದೆ.
ಬೂದುಪಟ್ಟಿಯಿಂದ ಹೊರಗಿಡಲು ಪಾಕ್ ಮನವಿ
ಭಯೋತ್ಪಾದಕ ಚಟುವಟಿಕಗಳಿಗೆ ಹಣಕಾಸಿನ ನೆರವು ನೀಡುವ ರಾಷ್ಟ್ರಗಳ ಮೇಲೆ ನಿಗಾ ಇರಿಸುವ ಎಫ್ಎಟಿಎಫ್ ಸಭೆ ಫೆಬ್ರವರಿಯಲ್ಲಿ ನಡೆಯಲಿದ್ದು, ಸಭೆಯಲ್ಲಿ ಪಾಕಿಸ್ಥಾನ ಮೂಲದ ಹಲವು ಸಂಘಟನೆಗಳಿಗೆ ಅಮೆರಿಕ ನೀಡಿರುವ ಭಯೊತ್ಪಾದಕ ಹಣೆಪಟ್ಟಿಯು ನಿರ್ಣಾಯಕ ಪಾತ್ರ ನಿರ್ವಹಿಸಲಿದೆ. ಅದರಂತೆ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೀಡದಂತೆ ತಡೆ ಹಿಡಿಯುವಲ್ಲಿ ಪಾಕಿಸ್ಥಾನದ ನಿಲುವನ್ನು ಪರಿಗಣಿಸಲಾಗುತ್ತದೆ. ಈ ವೇಳೆ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡದೆ ಅವುಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದರಿಂದ ತನ್ನನ್ನು ಬೂದು ಪಟ್ಟಿಯಿಂದ ಹೊರತೆಗೆಯಬೇಕೆಂದು ಆಗ್ರಹಿಸಿ ಪಾಕಿಸ್ಥಾನ ಮನವಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಪಾಕ್ ಕಪ್ಪು ಪಟ್ಟಿಗೆ ಸೇರುವ ಸಾಧ್ಯತೆಯೂ ಇದೆ
ಪಾಕಿಸ್ಥಾನ ಉಗ್ರರಿಗೆ ಧನಸಹಾಯ ಮಾಡುತ್ತಿರುವ ಬಗ್ಗೆ ಕಳೆದ ಅಕ್ಟೋಬರ್ನಲ್ಲಿ ಪರಿಶೀಲನೆ ನಡೆಸಲಾಗಿದ್ದು, ಪಾಕ್ ಈ ಬಗ್ಗೆ ತನ್ನ ಬದ್ಧತೆಯನ್ನು ಮೆರೆದಿಲ್ಲ. ಈ ವಿಷಯದಲ್ಲಿ ನಿರಂತರವಾಗಿ ವಿಫಲವಾಗುತ್ತಿರುವುದರಿಂದ ಆ ರಾಷ್ಟ್ರವನ್ನು ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆಗಳು ಇವೆ ಎಂದು ಎಫ್ಎಟಿಎಫ್ ಅಧ್ಯಕ್ಷ ಮರ್ಕಸ್ ಪ್ಲಿಯರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪಾಕಿಸ್ಥಾನ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡುವ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಭಾರತ ಮತ್ತು ಅಫ್ಘಾನಿಸ್ಥಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲವನ್ನು ಮುಂದುವರಿಸಿದೆ. ಹೀಗಿದ್ದರೂ, ಪಾಕಿಸ್ಥಾನ ಎಫ್ಎಟಿಎಫ್ನ ಮೆಚ್ಚುಗೆ ಗಳಿಸಲು ಹರಸಾಹಸ ಪಡುತ್ತಿದೆ.