ಮೈಸೂರು: ಲಿಂಗಾಯತ ಸಮುದಾಯದವರನ್ನು ಕೇಂದ್ರದಲ್ಲಿ ಓಬಿಸಿಗೆ ಸೇರಿಸಬೇಕು. ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿಯನ್ನು ನೀಡಬೇಕೆನ್ನುವುದು ನಮ್ಮ ಅಭಿಮತವಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಬುಧವಾರ ಮೈಸೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಮೀಸಲಾತಿ ವಿಚಾರವಾಗಿ ಹಲವಾರು ಚರ್ಚೆಗಳು ನಡೆಯುತ್ತಿವೆ. ನನ್ನನ್ನೂ ಸಾಕಷ್ಟು ಮಂದಿ ಪ್ರಶ್ನಿಸುತ್ತಿದ್ದಾರೆ. ಮೀಸಲಾತಿ ವಿಚಾರದಲ್ಲಿ ಪಂಚಮ ಸಾಲಿ ಲಿಂಗಾಯತರು, ಗೌಡ ಲಿಂಗಾಯತರಿಗೆ ಶಿಕ್ಷಣ, ಉದ್ಯೋಗದಲ್ಲಿ ಯಾವುದೇ ರೀತಿ ಮೀಸಲಾತಿ ಇಲ್ಲದಿರುವುದರಿಂದ ಅವರಿಗೆ 2ಎಗೆ ಸೇರಿಸುವ ಧ್ವನಿ ಈಗಾಗಲೇ ನಡೆದಿದೆ. ಆದರೆ, ಈಗಾಗಲೇ ನಾವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೊಂದಿಗೆ ಮುಕ್ತವಾಗಿ ಚರ್ಚಿಸಿದ್ದೇವೆ ಎಂದರು.
ಈಗ ಕೇಂದ್ರದಲ್ಲಿ ಇಡೀ ಲಿಂಗಾಯತ ಸಮುದಾಯದವರನ್ನು ಓಬಿಸಿಗೆ ಸೇರಿಸಬೇಕು. ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿಯನ್ನು ನೀಡಬೇಕೆನ್ನುವಂತಹದು ಆಗಬೇಕಿದೆ. ಇದಕ್ಕಾಗಿ ಮೊದಲಿಗೆ ಶೀಘ್ರ ಕುಲಶಾಸ್ತ್ರ ಅಧ್ಯಯನಕ್ಕೆ ಗೃಹಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೂ ಮನವಿ ಮಾಡಿದ್ದೇವೆ. ಕುಲಶಾಸ್ತ್ರ ಅಧ್ಯಯನದ ಆಧಾರದ ಬಳಿಕವಷ್ಟೇ ಯಾವುದೇ ಜನಾಂಗಕ್ಕೆ ಮೀಸಲಾತಿ ತಿಳಿಸಬೇಕಿದೆ. ಹೀಗಾಗಿ ಮೊದಲು ಕುಲಶಾಸ್ತ್ರ ಅಧ್ಯಯನ ಮಾಡಿಸುವಂತೆ ಮನವಿ ಕೊಟ್ಟಿದ್ದೇವೆ ಎಂದರು.
ಉತ್ತರ ಭಾರತದ ಪಂಚಮಸಾಲಿಗಳು, ಮೈಸೂರು ಭಾಗದಲ್ಲಿರುವ ಗೌಡ ಲಿಂಗಾಯತರು, ಮಲೆನಾಡಲ್ಲಿರುವ ಮಲೆಗೌಡರು, ಕಲ್ಯಾಣ ಕರ್ನಾಟಕದಲ್ಲಿರುವಂತಹ ದೀಕ್ಷಾ ಲಿಂಗಾಯತರು, ಕರಾವಳಿ ಕರ್ನಾಟಕದಲ್ಲಿರುವ ಗೌಳಿ ಲಿಂಗಾಯತರು, ಇವರೆಲ್ಲರೂ ಕೃಷಿಕರೇ, ಇವರೆಲ್ಲರೂ ಲಿಂಗಾಧಾರಿಗಳೇ, ಬಸವಾದಿ ಶರಣ ಕಾಯಕದಾಸೋಹ ಅಷ್ಟ ಪಂಚಾಸ್ತಾ ಶಾಲಿಯನ್ನು ಅನುಸರಿಸುವ ಸಮುದಾಯದವರೇ ಆಗಿದ್ದಾರೆ ಎಂದರು.
ಆದರೆ, ಬದಲಾದ ಕಾಲಘಟ್ಟದಲ್ಲಿ ಬೇರೆ ಬೇರೆ ಕಡೆ ಹೋಗಿ ನೆಲೆಸಿದ್ದಾರೆ. ಇಡೀ ಒಕ್ಕಗರು, ಕೃಷಿಕ ಲಿಂಗಾಯತರನ್ನು ಒಗ್ಗೂಡಿಸುವಂತಹ ವ್ಯವಸ್ಥಿತ ಕೆಲಸಕ್ಕೆ ನಾವು ಕೈ ಹಾಕಿದ್ದೇವೆ. ಆ ಕೆಲಸ ಅತ್ಯಂತ ಪ್ರಗತಿಯುತವಾಗಿ ನಡೆಯುತ್ತಿದೆ. ಬರುವ ಹರ ಜತ್ರೆ ಮುಗಿದ ಬಳಿಕ ಗ್ರಾಮದರ್ಶನವನ್ನು ನಾಡಿನಾದ್ಯಂತ ಮಾಡುತ್ತೇವೆ. ಮುಂದಿನ ವರ್ಷದವರೆಗೇ ಬರೀ ಗ್ರಾಮ ದರ್ಶಮಾಡಲು ನಿರ್ಧರಿಸಿದ್ದೇವೆ. ಜ.2ರಿಂದ 7ರವರೆಗೆ ಬಳ್ಳಾರಿಯಲ್ಲಿ ಗ್ರಾಮ ದರ್ಶನ ಮಾಡುತ್ತೇವೆ. 5 ದಿನದಲ್ಲಿ ನೂರು ಗ್ರಾಮಗಳಿಗೆ ಹೋಗಲು ನಿಶ್ಚಯಿಸಿದ್ದೇವೆ. ರಾಜ್ಯದ ಎಲ್ಲಾ ಕಡೆಗಳಿಗೂ ಅಲೆದಾಡಿ ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.