ಉಡುಪಿ: ಅಯೋಧ್ಯಾದಲ್ಲಿ ಭವ್ಯವಾದ ರಾಮ ಮಂದಿರದ ತಳಪಾಯದ ವಿನ್ಯಾಸವನ್ನು ವಿಮರ್ಶಿಸಿ ಶಿಫಾರಸ್ಸು ಮತ್ತು ವರದಿ ಸಲ್ಲಿಸುವುದಕ್ಕೆ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಜ್ಞ ಇಂಜಿನಿಯರ್ಸ್ ಸಮಿತಿಯನ್ನು ರಚಿಸಿದೆ. ಎಂಟು ಮಂದಿ ಇಂಜಿನಿಯರ್ಗಳುಳ್ಳ ಈ ಸಮಿತಿಯು ವರದಿ ಮತ್ತು ಶಿಫಾರಸ್ಸುಗಳನ್ನು ಟ್ರಸ್ಟ್ಗೆ ಸಲ್ಲಿಸಲಿದೆ.
ಮೂರು ದಿನಗಳ ಹಿಂದೆ ರಚಿಸಲಾದ ಈ ತಜ್ಞರ ಸಮಿತಿಯ ನೇತೃತ್ವವನ್ನು ದಿಲ್ಲಿಯ ಐಐಟಿ ಮಾಜಿ ನಿರ್ದೇಶಕ ವಿ.ಎಸ್.ರಾಜು ವಹಿಸಿದ್ದಾರೆ. ರೂರ್ಕಿಯಲ್ಲಿರುವ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಬಿಆರ್ಐ) ನಿರ್ದೇಶಕ ಎನ್. ಗೋಪಾಲಕೃಷ್ಣನ್ ಸಮಿತಿಯ ಸಂಚಾಲಕರಾಗಿದ್ದಾರೆ. ಉಳಿದಂತೆ ಎನ್ಐಟಿ ಸೂರತ್ನ ನಿರ್ದೇಶಕ ಎಸ್.ಆರ್. ಗಾಂ, ಐಐಟಿ ಗುವಾಹಟಿ ನಿರ್ದೇಶಕ ಟಿ.ಜಿ. ಸೀತಾರಾಮ್, ಐಐಟಿ ದಿಲ್ಲಿಯ ನಿವೃತ್ತ ಪ್ರಾಧ್ಯಾಪಕ ಬಿ.ಭಟ್ಟಾಚಾರ್ಜಿ, ಟಿಸಿಇ ಸಲಹೆಗಾರ ಎ.ಪಿ. ಮುಲ್, ಐಐಟಿ ಮದ್ರಾಸ್ನಪೊ . ಮನು ಸಂಥಾನಂ ಮತ್ತು ಐಐಟಿ ಮುಂಬೈನ ಪೊ . ಪ್ರದೀಪ್ತಾ ಬ್ಯಾನರ್ಜಿ ಸಮಿತಿಯ ಸದಸ್ಯರಾಗಿದ್ದಾರೆ.
ಶ್ರೀರಾಮಮಂದಿರವನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಗುತ್ತಿಗೆ ಪಡೆದ ಲಾರ್ಸೆನ್ ಆ್ಯಂಡ್ ಟಾಬ್ರೊ (ಎಲ್ ಆ್ಯಂಡ್ ಟಿ) ಮತ್ತು ಯೋಜನಾ ನಿರ್ವಹಣಾ ಸಲಹೆಗಾರರಾಗಿರುವ ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ (ಟಿಸಿಇ) ಸಂಸ್ಥೆಗಳಲ್ಲಿರುವ ಮಂದಿರದ ವಾಸ್ತುಶಿಲ್ಪ ಮತ್ತು ರಚನಾತ್ಮಕ ವಿನ್ಯಾಸ, ಮಣ್ಣಿನ ಪರೀಕ್ಷಾ ವರದಿ ಮತ್ತು ಪೈಲ್ ಪರೀಕ್ಷಾ ವರದಿ ಸಹಿತ ಲಭ್ಯವಿರುವ ಎಲ್ಲ ವಿವರಗಳನ್ನು ಸಮಿತಿಗೆ ನೀಡಲಾಗುವುದು ಎಂದು ಟ್ರಸ್ಟ್ ಹೇಳಿದೆ. ಅಲ್ಲದೇ ಮಂಗಳವಾರದೊಳಗೆ ಈ ತಜ್ಞರ ಸಮಿತಿಯು ವರದಿ ಸಲ್ಲಿಸುವ ನಿರೀಕ್ಷೆಯನ್ನೂ ಟ್ರಸ್ಟ್ ಹೊಂದಿತ್ತು.
ಭೂ ಧಾರಣಾ ಶಕ್ತಿ-ಮಣ್ಣಿನ ಪರೀಕ್ಷೆ ಪೂರ್ಣ
ಎಲ್ ಆ್ಯಂಡ್ ಟಿ ಸಂಸ್ಥೆಯು ಸೆಂಗರ್ಸ್ ಜಿಯೋಟೆಕ್ನಿಕಾ ಪ್ರೈ.ಲಿ. ಮೂಲಕ ಮಂದಿರ ನಿರ್ಮಾಣ ಪ್ರದೇಶದ ಮಣ್ಣಿನ ಪರೀಕ್ಷೆ ನಡೆಸಿದೆ. ಯೋಜನಾ ನಿರ್ವಹಣಾ ಸಲಹೆಗಾರರಾಗಿರುವ ಟಿಸಿಇಯು ಎಲ್ ಆ್ಯಂಡ್ ಟಿ ಪ್ರಸ್ತಾಪಿಸಿದ ಅಡಿಪಾಯ ವಿನ್ಯಾಸದ ವಿಮರ್ಶೆ ಮತ್ತು ಪ್ರಮಾಣೀಕರಿಸಲಿದೆ. ವಿನ್ಯಾಸ ಪರಿಶೀಲನೆಗಾಗಿ ಟಿಸಿಇಗೆ ಅಗತ್ಯವಿರುವ ಎಲ್ಲ ದತ್ತಾಂಶ ಮತ್ತು ದಾಖಲೆಗಳನ್ನು ಎಲ್ ಆ್ಯಂಡ್ ಟಿ ಒದಗಿಸಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
ವರದಿ ಸಲ್ಲಿಕೆ ಬಳಿಕ ನೈಜ ನಿರ್ಮಾಣ ಕಾರ್ಯ
ಟ್ರಸ್ಟ್ ಹೇಳಿರುವಂತೆ, ಎಲ್ ಆ್ಯಂಡ್ ಟಿ ವಿನ್ಯಾಸ ತಂಡ, ಟಿಸಿಇ, ಸಿಬಿಆರ್ಐ-ರೂರ್ಕಿ ಮತ್ತು ಐಐಟಿ-ಮದ್ರಾಸ್ನ ವಿನ್ಯಾಸ ವಿಮರ್ಶೆ ತಂಡದೊಂದಿಗೆ ಚರ್ಚೆ ಮತ್ತು ಸಂವಾದ ನಡೆಸಲು ಮತ್ತು ವಿವರಗಳು, ದತ್ತಾಂಶ ಮತ್ತು ದಾಖಲೆಗಳನ್ನು ಪಡೆಯಲು ಹೊಸ ಸಮಿತಿಗೆ ಅಕಾರವಿದೆ. ಈ ಸಮಿತಿಯು ತನ್ನ ವರದಿ ಮತ್ತು ಶಿಫಾರಸ್ಸುಗಳನ್ನು ಟ್ರಸ್ಟ್ಗೆ ಸಲ್ಲಿಸಿದ ನಂತರ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣದ ನಿಜವಾದ ಕಾರ್ಯಗಳು ಪ್ರಾರಂಭವಾಗಲಿವೆ.
ಉಪಸಮಿತಿ ಕಾರ್ಯಗಳು ಬೇರೆಯೇ ಇವೆ
ವಿವಿಧ ಜಿಯೋಟೆಕ್ನಿಕಲ್ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಅತ್ಯುನ್ನತ ಗುಣಮಟ್ಟ ಮತ್ತು ದೀರ್ಘಾಯುಷ್ಯದೊಂದಿಗೆ ರಾಮಮಂದಿರ ನಿರ್ಮಿಸಲು ನೃಪೇಂದ್ರ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಮಂದಿರ ನಿರ್ಮಾಣ ಸಮಿತಿಯು ಶ್ರೇಷ್ಠ ಇಂಜಿನಿಯರ್ಸ್ ಉಪಸಮಿತಿಯನ್ನು ರಚಿಸಿತ್ತು. ಈ ಉಪಸಮಿತಿಯು ಎಲ್ಲ ಸಲಹೆಗಳು ಮತ್ತು ಪ್ರಸ್ತಾಪಗಳನ್ನು ಅಧ್ಯಯನ ಮಾಡುತ್ತದೆ ಮತ್ತು ನಿರ್ಮಾಣಕ್ಕೆ ಸಂಬಂಸಿದಂತೆ ವಿವರವಾದ ಯೋಜನೆಯನ್ನು ರೂಪಿಸಲಿದೆ ಎಂದು ಟ್ರಸ್ಟ್ ಅಕೃತವಾಗಿ ಹೇಳಿತ್ತು.
ಆದರೆ ಇದೀಗ ಹೊಸದಾಗಿ ರಚನೆಯಾಗಿರುವ ತಜ್ಞರ ಸಮಿತಿಯು ತಳಪಾಯ ವಿನ್ಯಾಸ ಮತ್ತು ಎಲ್ ಆ್ಯಂಡ್ ಟಿ ಬಳಸುವ ನಿರ್ಮಾಣ ಸಾಮಗ್ರಿಗಳ ಆಯ್ಕೆಯನ್ನು ಪರಿಶೀಲಿಸುತ್ತದೆ. ಅಲ್ಲದೇ ಉಷ್ಣ ಮತ್ತು ಕುಗ್ಗುವಿಕೆ ಬಿರುಕುಗಳನ್ನು ಕಡಿಮೆ ಮಾಡಲು, ನಿರ್ಮಾಣ ವಿಧಾನದ ಬಗ್ಗೆಯೂ ಸಲಹೆಗಳನ್ನು ನೀಡುತ್ತದೆ. ಜೊತೆಗೆ ಬೇರೆ ಯಾವುದೇ ಸಂಬಂತ ಪರಿಗಣನೆಗಳನ್ನು ಸೇರಿಸಲು ಮತ್ತು ಆದ್ಯತೆಯ ಪರ್ಯಾಯಗಳನ್ನು ಒದಗಿಸಲು ಸಮಿತಿಯು ಮುಕ್ತವಾಗಿರುತ್ತದೆ ಎಂದು ಟ್ರಸ್ಟ್ ಹೇಳಿದೆ.