ಹೊಸದಿಲ್ಲಿ: ದೇಶದ ಬಹುನಿರೀಕ್ಷಿತ ಸಂಸತ್ ಭವನದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಜನತೆಯ ಸಂಸತ್ ನಿರ್ಮಾಣ ಮಾಡುವ ಐತಿಹಾಸಿಕ ಅವಕಾಶವಾಗಿದೆ. 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ `ನವ ಭಾರತ’ದ ಆಶೋತ್ತರಗಳು ಮತ್ತು ಅಗತ್ಯ ಪೂರೈಸಲು ಈ ಭವನ ನಿರ್ಮಿಸಲಾಗುತ್ತಿದೆ.
ನೂತನ ಸಂಸತ್ ಭವನ ಅತ್ಯಾಧುನಿಕ ತಂತ್ರಜನ ಮತ್ತು ಪರಿಣಾಮಕಾರಿ ಇಂಧನ ವ್ಯವಸ್ಥೆ, ತಡೆರಹಿತ ಭದ್ರತಾ ಸೌಲಭ್ಯಗಳು ಒಳಗೊಂಡಿರಲಿದ್ದು, ಈ ಕಟ್ಟಡ ಹಾಲಿ ಸಂಸತ್ ಭವನಕ್ಕೆ ಹೊಂದಿಕೊಂಡಂತೆ ತ್ರಿಕೋನಾಕಾರದ ವಿನ್ಯಾಸದಲ್ಲಿ ನಿರ್ಮಾಣವಾಗಲಿದೆ. ಲೋಕಸಭೆಯ ಒಳಾಂಗಣ ಪ್ರದೇಶ ಈಗ ಇರುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ ಮತ್ತು ರಾಜ್ಯಸಭೆಯ ವಿಸ್ತೀರ್ಣ ಗಣನೀಯವಾಗಿ ಹೆಚ್ಚಾಗಲಿದೆ. ಹೊಸ ಭವನ ಒಳಾಂಗಣ ವಿನ್ಯಾಸದಲ್ಲಿ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಪ್ರಾದೇಶಿಕ ಕಲೆ, ಕರಕುಶಲಕಲೆ, ಜವಳಿ ಮತ್ತು ವಾಸ್ತುಶಿಲ್ಪ ಸೇರಿ ವೈವಿಧ್ಯತೆಯ ಸಮ್ಮಿಶ್ರಣವಾಗಿರಲಿದೆ. ಇದರ ವಿನ್ಯಾಸದಲ್ಲಿ ಅದ್ಭುತ ಕೇಂದ್ರೀಯ ಸಂವಿಧಾನ ಗ್ಯಾಲರಿಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಅದಕ್ಕೆ ಸಾರ್ವಜನಿಕರ ಭೇಟಿ ನೀಡಲು ಅವಕಾಶವಿರಲಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ (ಸ್ವತಂತ್ರ ಹೊಣೆಗಾರಿಕೆ) ಹರ್ದೀಪ್ ಸಿಂಗ್ ಪುರಿ, ರಾಜ್ಯಸಭೆ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಕೇಂದ್ರ ಸಂಪುಟ ಸಚಿವರು, ರಾಜ್ಯ ಸಚಿವರು, ಸಂಸದರು ಸೇರಿ 200 ಗಣ್ಯರು ಭಾಗವಹಿಸಲಿದ್ದಾರೆ.