ಉಡುಪಿ: ಕಳೆದ ಮೂರು ದಿನದಿಂದ ಅಯೋಧ್ಯೆ ಪ್ರವಾಸದಲ್ಲಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಸೋಮವಾರ ಶ್ರೀರಾಮ ಲಲ್ಲಾ ಮೂರ್ತಿಗೆ ಚಾಮರಸೇವೆ ನಡೆಸಿದ್ದಾರೆ.
ಭಾನುವಾರ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾಮಗಾರಿಯ ಪರಿವೀಕ್ಷಣೆ ನಡೆಸಿದ ಪೇಜಾವರ ಶ್ರೀಗಳು, ಅಲ್ಲಿನ ತಾತ್ಕಾಲಿಕ ಗುಡಿಯಲ್ಲಿರುವ ಶ್ರೀರಾಮ ದೇವರ ದರ್ಶನ ಪಡೆದಿದ್ದರು. ಅಲ್ಲದೇ ಸಂಜೆಯ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡಿದ್ದರು. ಸೋಮವಾರ ಬೆಳಗ್ಗೆ ಮತ್ತೆ ರಾಮ ಲಲ್ಲಾನ ಗುಡಿಗೆ ಹೋಗಿ, ದೇವರಿಗೆ ವಿಶೇಷ ಚಾಮರ ಸೇವೆ ಸಲ್ಲಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರು, ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿಗೆ ದೇಗುಲದಲ್ಲಿ ನಡೆಯುವ ಪೂಜೆ ಪುನಸ್ಕಾರ, ಸಂಪ್ರದಾಯಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಕೆತ್ತನೆ ಮಾಡಿ, ಸಿದ್ಧಪಡಿಸಿರುವ ಶಿಲೆಗಳನ್ನೂ ವೀಕ್ಷಿಸಿದರು.
ಅದಕ್ಕೂ ಮೊದಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಅಧ್ಯಕ್ಷರಾದ ಮಹಾಂತ ನೃತ್ಯ ಗೋಪಾಲದಾಸ್ ಅವರನ್ನು ಭೇಟಿಯಾದರು. ಅಸ್ವಸ್ಥರಾಗಿರುವ ಮಹಾಂತ ನೃತ್ಯ ಗೋಪಾಲದಾಸ್ ಅವರನ್ನು ಅವರ ಅಯೋಧ್ಯೆಯ ಮಣಿರಾಮ ಚಾವಣಿ ಅಖಾಡದಲ್ಲಿಯೇ ಭೇಟಿಯಾದರು. ಅವರ ಆರೋಗ್ಯ ಶೀಘ್ರವೇ ಸುಧಾರಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ, ಶ್ರೀಕೃಷ್ಣನ ಮೂರ್ತಿ ನೀಡಿ, ಶಾಲು ಹೊದೆಸಿದರು.
ಬಳಿಕ ನೃತ್ಯಗೋಪಾಲ ದಾಸ್ ಅವರ ಉತ್ತರಾಕಾರಿ ಮಹಾಂತ ಕಮಲನಯನ ದಾಸ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಕಮಲನಯನ ದಾಸ್ ಅವರು, ಪೇಜಾವರ ಪರ್ಯಾಯ ಅವಯಲ್ಲಿ ಉಡುಪಿಯಲ್ಲಿ ನಡೆದ ಧರ್ಮಸಂಸತ್ನ ಸಂತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದನ್ನು ಸ್ಮರಿಸಿದರು.
ಉಡುಪಿಯಿಂದ ಉತ್ತರ ಭಾರತ ಯಾತ್ರೆಗೆ ತೆರಳಿದ್ದ ಪೇಜಾವರ ಶ್ರೀಗಳು ಶನಿವಾರದಿಂದ ಧರ್ಮ ನಗರಿ ಅಯೋಧ್ಯೆಯಲ್ಲಿದ್ದರು. ತೀರ್ಥ ಕ್ಷೇತ್ರ ಟ್ರಸ್ಟ್ನ ಸಭೆಯಲ್ಲಿ ಭಾಗಿ, ರಾಮ ಲಲ್ಲಾನ ದರ್ಶನ, ಮಂದಿರ ನಿರ್ಮಾಣ ಕಾಮಗಾರಿ ಪರಿವೀಕ್ಷಣೆ ಮುಂತಾದ ಕಾರ್ಯಗಳನ್ನು ಮುಗಿಸಿ, ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಅಯೋಧ್ಯೆಯಿಂದ ಹೊರಟರು.
ಈ ವೇಳೆ ಪೇಜಾವರ ಮಠದ ಅಯೋಧ್ಯೆ ಶಾಖೆ ಶ್ರೀಮಧ್ವಾಶ್ರಮ ಪ್ರಮೋದವನದ ಮ್ಯಾನೇಜರ್ ಆಗಿರುವ ವಕೀಲ ಮಹೇಂದ್ರ ದುಬೆ, ಪೇಜಾವರ ಶ್ರೀಗಳ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಜೊತೆಯಲ್ಲಿದ್ದರು.