ಹೊಸದಿಲ್ಲಿ: ಉಗ್ರ ಪೊಷಣೆ ರಾಷ್ಟ್ರ ಪಾಕಿಸ್ಥಾನ ಡ್ರೋನ್ ಮೂಲಕ ದಾಳಿ ನಡೆಸುವ ಅಪಾಯ ಹೆಚ್ಚಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ.
ಈ ಹಿನ್ನೆಲೆ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಹೆಚ್ಚಿನ ಸಂಖ್ಯೆಯಲ್ಲಿ ಡ್ರೋನ್ ನಿಗ್ರಹ ವ್ಯವಸ್ಥೆ ಅಭಿವೃದ್ಧಿ ಪಡಿಸುವ ಉಸ್ತುವಾರಿಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ವಹಿಸಿದೆ. ಪ್ರಧಾನಿ ಭದ್ರತೆಯೊಂದಿಗೆ ಸೇನೆಗಾಗಿಯೂ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರಧಾನಿ ನಿವಾಸದಲ್ಲಿ ಹಾಗೂ ಕಾರ್ನೊಳಗೆ ಪೊರ್ಟಬಲ್ ಡ್ರೋನ್ ನಿಗ್ರಹ ವ್ಯವಸ್ಥೆ ಅಳವಡಿಸಲಾಗುತ್ತದೆ.
ಚೀನಾ ನಿರ್ಮಿತ ಡ್ರೋನ್ಗಳನ್ನು ಬಳಸಿ ಪಾಕಿಸ್ಥಾನಿ ಉಗ್ರರು 2020ರ ಆರಂಭದಿಂದಲೂ ಜಮ್ಮು – ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಶಸ್ತ್ರಾಸ್ತ್ರ ಬಿಸಾಡಲು, ಮಾದಕ ವಸ್ತು ಕಳ್ಳಸಾಗಿಸಲು ಆರಂಭಿಸಿದ್ದಾರೆ. ಅಲ್ಲದೇ ಇತ್ತೀಚಿಗೆ ಡ್ರೋನ್ ಮೂಲಕ ಭಾರತೀಯ ಯೋಧರ ಮೇಲೆ ಗ್ರೆನೆಡ್ ದಾಳಿ ಮಾಡಲು ಶುರುಮಾಡಿದ್ದಾರೆ. ಹಾಗಾಗಿ ಡಿಆರ್ಡಿಒ ಇಂತಹ ಡ್ರೋನ್ಗಳನ್ನು ಪತ್ತೆ ಹಚ್ಚುವುದರೊಂದಿಗೆ ಹೊಡೆದುರುಳಿಸುವ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿತ್ತು. ಇದು ಸುಮಾರು 3 ಕಿ.ಮೀ. ದೂರದಲ್ಲಿರುವ ಡ್ರೋನ್ಗಳನ್ನು ರೆಡಾರ್ ಮೂಲಕ ಪತ್ತೆ ಹಚ್ಚಿ ಹೊಡುದುರುಳಿಸುವ ಸಾಮಥ್ರ್ಯ ಹೊಂದಿದೆ.
ಈ ವ್ಯವಸ್ಥೆಯನ್ನು ಪ್ರಧಾನಿ ಭದ್ರತೆಗೆಂದು ಈ ವರ್ಷದ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲೂ ನಿಯೋಜಿಸಲಾಗಿತ್ತು. ಇನ್ನು ದೇಶದಲ್ಲೇ ಡ್ರೋನ್ ನಿಗ್ರಹ ವ್ಯವಸ್ಥೆ ಅಭಿವೃದ್ಧಿ ಪಡಿಸುವ ಬಗ್ಗೆ ಡಿಆರ್ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ಭಾರತೀಯ ಸೇನೆಗೂ ಪತ್ರ ಬರೆಯಲಿದ್ದಾರೆ.