ಯುದ್ಧ ಸಾರಿದರೂ ಸಾರಬಹುದು ಎಂದು ಚೀನಾ ತಜ್ಞರಿಂದ ಎಚ್ಚರಿಕೆ ಜೋ ಬೈಡನ್ ದುರ್ಬಲ ಅಧ್ಯಕ್ಷ

ಬೀಜಿಂಗ್: ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿರುವ ಜೋ ಬೈಡನ್ ಚೀನಾ ಪರ ನಿಲುವು ಹೊಂದಿದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಬೈಡನ್ ದುರ್ಬಲ ಅಧ್ಯಕ್ಷ ಎಂದು ಚೀನಾ ಟೀಕಿಸಿದೆ. ಅಲ್ಲದೆ, ಅವರು ಯಾವಾಗ ಬೇಕಾದರೂ ಚೀನಾ ಮೇಲೆ ಮುಗಿಬೀಳಬಹುದು ಎಂಬ ಆತಂಕ ವ್ಯಕ್ತಪಡಿಸಿದೆ.
ದೇಶದ ವಿಚಾರದಲ್ಲಿ ಅಮೆರಿಕ ನಾಗರಿಕರು ಭಾವನಾತ್ಮಕರಾಗಿದ್ದಾರೆ. ಹಾಗಾಗಿ ಬೈಡನ್ ಶ್ವೇತಭವನ ಪ್ರವೇಶಿಸುತ್ತಲೇ ದೇಶಿ ವಿಚಾರಗಳ ಕಡೆ ಹೆಚ್ಚಿನ ಗಮನ ಹರಿಸುತ್ತಾರೆ. ಆಗ ಸಹಜವಾಗಿಯೇ ರಾಜತಾಂತ್ರಿಕ ವಿಚಾರದಲ್ಲಿ ಚೀನಾ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲಿದ್ದಾರೆ ಎಂದು ಅಡ್ವಾನ್ಸ್ಡ್ ಇನ್‍ಸ್ಟಿಟ್ಯೂಟ್ ಆಫ್ ಗ್ಲೋಬಲ್ ಆ್ಯಂಡ್ ಕಂಟೆಂಪರರಿ ಚೀನಾ ಸ್ಟಡೀಸ್ ಡೀನ್, ರಾಜಕೀಯ ತಜ್ಞ ಜೆಂಗ್ ಯೋಂಗ್ನಿಯಾನ್ ಹೇಳಿದ್ದಾರೆ.
ಒಳ್ಳೆಯ ದಿನಗಳು ಮುಗಿದಿವೆ. ಚೀನಾ ಹಾಗೂ ಅಮೆರಿಕ ನಡುವಿನ ಶೀತಲ ಸಮರ ರಾತ್ರೋರಾತ್ರಿ ಮುಗಿಯುವುದಿಲ್ಲ. ಅದರಲ್ಲೂ ಬೈಡನ್ ತುಂಬ ದುರ್ಬಲ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಅವರು ಚೀನಾ ವಿರುದ್ಧ ರಾಜತಾಂತ್ರಿಕ ಸೇರಿ ಹಲವು ಮಾರ್ಗ ಅನುಸರಿಸಲಿದ್ದಾರೆ ಎಂದು ಎಚ್ಚರಿಸಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕ ಹಾಗೂ ಚೀನಾ ಮಧ್ಯೆ ಆಮದು ಸುಂಕದ ವಿಚಾರದಲ್ಲಿ ಭಿನ್ನಾಭಿಪ್ರಾಯ ಇತ್ತು. ಅದರಲ್ಲೂ ಕೊರೋನಾ ಬಳಿಕ ಟ್ರಂಪ್, ಚೀನಾ ವಿರುದ್ಧ ಬಹಿರಂಗವಾಗಿಯೇ ಟೀಕಿಸಿದ್ದರು. ಈಗ ಬೈಡನ್ ಅಧ್ಯಕ್ಷರಾಗುತ್ತಿರುವ ಬೆನ್ನಲ್ಲೇ ಮುಂದೆಯೂ ಸಂಬಂಧ ಸುಧಾರಿಸಲ್ಲ ಎಂಬ ಅಭಿಪ್ರಾಯ ಮುಂದಿನ ನಡೆಗಳ ಕುರಿತು ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ