ವಾಷಿಂಗ್ಟನ್: 2010ರಲ್ಲಿ ಅಮೆರಿಕ ಅಧ್ಯಕ್ಷನಾಗಿ ಭಾರತಕ್ಕೆ ಭೇಟಿ ನೀಡುವ ಮುನ್ನವೇ ಭಾರತದ ಬಗೆಗಿನ ಆಸಕ್ತಿ ಬಾಲ್ಯದಲ್ಲೇ ಇತ್ತು ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರಾಕ್ ಒಬಾಮ ಹೇಳಿಕೊಂಡಿದ್ದಾರೆ.
ಒಬಾಮ ತಮ್ಮ ಬಾಲ್ಯದಲ್ಲಿ ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಕೇಳುತ್ತಿದ್ದರಂತೆ. ಮಹಾತ್ಮ ಗಾಂಧಿಯವರ ಪ್ರಭಾವದ ಕಾರಣದಿಂದಾಗಿ ಭಾರತ ಒಬಾಮ ಅವರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿತ್ತು. ಬ್ರಿಟಿಷ್ ಆಡಳಿತದ ವಿರುದ್ಧ ಯಶಸ್ವಿ ಅಹಿಂಸಾತ್ಮಕ ಅಭಿಯಾನವು ಕೊನೆಯ ಅಂಚಿನಲ್ಲಿದ್ದವರಿಗೆ ದಾರಿದೀಪವಾಯಿತು ಎಂಬುದನ್ನು ‘ಎ ಪ್ರಾಮಿಸ್ಡ್ ಲ್ಯಾಂಡ್’ನ ಮೊದಲನೇ ಆವೃತ್ತಿಯಲ್ಲಿ ಉಲ್ಲೇಖಗೊಂಡಿದೆ.
ಬಹುಶಃ ನನ್ನ ಬಾಲ್ಯದ ಒಂದು ಭಾಗವನ್ನು ನಾನು ಇಂಡೋನೇಷ್ಯಾದಲ್ಲಿ ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಕೇಳುತ್ತಾ ಕಳೆದಿದ್ದೇನೆ. ಪೂರ್ವ ಧರ್ಮಗಳ ಬಗ್ಗೆ ನನ್ನ ಆಸಕ್ತಿಯಿಂದ ಅಥವಾ ಪಾಕಿಸ್ತಾನಿ ಮತ್ತು ಭಾರತೀಯ ಕಾಲೇಜು ಸ್ನೇಹಿತರ ಗುಂಪಿನ ಕಾರಣದಿಂದಾಗಿ ಇರಬಹುದು. ಕಾಲೇಜು ಸ್ನೇಹಿತರು ದಾಲ್ ಮತ್ತು ಖೀಮಾ ಅಡುಗೆ ಮಾಡಲು ನನಗೆ ಕಲಿಸಿದ್ದರು. ಮುಂದೆ ಅದು ನನ್ನನ್ನು ಬಾಲಿವುಡ್ ಚಲನಚಿತ್ರಗತ್ತ ತಿರುಗಿಸಿತ್ತು ಎಂದು ಒಬಾಮ ಬರೆದುಕೊಂಡಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಬಗ್ಗೆ ನನ್ನ ಆಸಕ್ತಿ ಮಹಾತ್ಮ ಗಾಂಧಿ ಅವರಿಂದಾಗಿ ಹೆಚ್ಚಾಯಿತು. ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ ಅವರೊಂದಿಗೆ ಗಾಂಧಿ ನನ್ನ ಆಲೋಚನೆಯನ್ನು ಆಳವಾಗಿ ಪ್ರಭಾವಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.