ಶಿವಮೊಗ್ಗ: ಬರೋಬ್ಬರಿ ಒಂಭತ್ತು ತಿಂಗಳ ಬಿಡುವಿನ ಬಳಿಕ ಕಾಲೇಜುಗಳು ಮಂಗಳವಾರದಿಂದ ಆರಂಭವಾದರೂ ವಿದ್ಯಾರ್ಥಿಗಳು ಮಾತ್ರ ಆರಂಭದ ದಿನ ತರಗತಿಗಳಿಗೆ ಹಾಜರಾಗಲು ಆಸಕ್ತಿ ತೋರದಿರುವುದು ಕಂಡುಬಂದಿದೆ.
ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಕುವೆಂಪು ವಿವಿ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಮಂಗಳವಾರ ಪುನರಾರಂಭಿಸಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಆರಂಭಿಸಿರುವ ವಿಶ್ವವಿದ್ಯಾಲಯ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಅನ್ವಯ ತರಗತಿ ಕೊಠಡಿ, ಹಾಸ್ಟೆಲ್ ಕೊಠಡಿ, ಪ್ರಯೋಗಾಲಯ, ಕಚೇರಿ ಸೇರಿದಂತೆ ವಿವಿಯ ಕ್ಯಾಂಪಸ್ ಅನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿತ್ತು. ಕ್ಯಾಂಪಸ್ಗೆ ಬರುವ ಪ್ರತಿ ವಿದ್ಯಾರ್ಥಿ, ಅಧ್ಯಾಪಕರು ಹಾಗೂ ಸಿಬ್ಬಂದಿಗಳಿಗೆ ಮುಖ್ಯದ್ವಾರದ ಬಳಿ ಸ್ಯಾನಿಟೈಸ್ ಮಾಡಿ, ಅವರ ವಿವರಗಳನ್ನು ಹಾಗೂ ದೂರವಾಣಿ ಸಂಖ್ಯೆ ಪಡೆದು ನಂತರ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.