ತಾಪಂ, ಜಿಪಂ ಸಮರ | ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಮೂರು ದಿನ ಗ್ರಾಮ ಸೇವಕ ಸಮಾವೇಶ

ಶಿವಮೊಗ್ಗ: ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಸಲುವಾಗಿ ಬಿಜೆಪಿಯಿಂದ ಗ್ರಾಮ ಸೇವಕ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ.
ನಗರದ ಪೆಸಿಟ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಒಟ್ಟು ಐದು ತಂಡಗಳ ನೇತೃತ್ವದಲ್ಲಿ ಗ್ರಾಮ ಸೇವಕ ಸಮಾವೇಶ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ತಿಳಿಸಿದರು.
ಆರು ಜಿಲ್ಲೆಗಳಲ್ಲಿ ಪ್ರವಾಸ:
ಮೊದಲ ತಂಡದ ನೇತೃತ್ವವನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೇ ವಹಿಸಲಿದ್ದಾರೆ . ಪ್ರತಿ ತಂಡ ಆರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಪ್ರತಿ ದಿನ ಎರಡು ಜಿಲ್ಲೆಯಲ್ಲಿ ಸಮಾವೇಶ ನಡೆಸಲಾಗುತ್ತದೆ ಎಂದರು.
ಜ.11ರಂದು ಮೈಸೂರಿನಲ್ಲಿ ಚಾಲನೆ:
ಜನವರಿ 11 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಿದ್ದಾರೆ. ಬಳಿಕ 12 ಮತ್ತು 13 ರಂದು ಅಕ್ಕಪಕ್ಕದ ಜಿಲ್ಲೆಯಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ರೈತರ ಅಭ್ಯುದಯಕ್ಕೆ ಎಂದು ತಂದಿರುವ ಕಾಯ್ದೆಗಳನ್ನು ಕಾಂಗ್ರೆಸ್, ಎಡ ಪಕ್ಷಗಳು ತಪ್ಪು ಮಾಹಿತಿ ನೀಡಿ ರೈತರ ದಾರಿ ತಪ್ಪಿಸುತ್ತಿವೆ. ಸಮಾವೇಶದಲ್ಲಿ ಕಾಯ್ದೆ ರೈತ ಪರ ಎಂಬುದನ್ನು ಮನದಟ್ಟು ಮಾಡಲಾಗುವುದು ಎಂದು ತಿಳಿಸಿದರು.
ಐದು ತಂಡ ರಚನೆ:
ಒಟ್ಟು ಐದು ತಂಡಗಳು ಗ್ರಾಮ ಸೇವಕ ಸಮಾವೇಶದಲ್ಲಿ ಕಾರ್ಯನಿರ್ವಹಿಸಲಿವೆ. ಜನವರಿ 11ರಿಂದ 13ರವರೆಗೆ ಈ ಸಮಾವೇಶ ನಡೆಯಲಿದೆ ಒಂದೊಂದು ತಂಡ ಪ್ರತಿದಿನ ಎರಡು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ. ಅಂತಿಮ ಸಮಾರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಳ್ಗೊಳ್ಳಲಿದ್ದಾರೆ.
ನಳಿನ್ ಮೊದಲ ತಂಡದ ನೇತೃತ್ವ:
ಮೊದಲ ತಂಡದ ನೇತೃತ್ವವನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಹಿಸಿಕೊಳ್ಳಲಿದ್ದಾರೆ. ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಪ್ರತಾಪ ಸಿಂಹ ಮುಂತಾದವರು ಇರುವ ತಂಡ ಜ.11 ರಂದು ಮೈಸೂರು ಮತ್ತು ಚಾಮರಾಜನಗರ, 12 ರಂದು ಹಾಸನ ಮತ್ತು ಮಂಡ್ಯ, 13 ರಂದು ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಪಾಲ್ಗೊಳ್ಳಲಿದೆ.
ಎರಡನೇ ತಂಡದ ನೇತೃತ್ವ ಸಚಿವ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ. ಈ ತಂಡ ಜ.11 ರಂದು ಚಿಕ್ಕಮಗಳೂರು-ಉಡುಪಿ, 12 ರಂದು ಕೊಡಗು-ಮಂಗಳೂರು ಹಾಗೂ 13 ರಂದು ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಲ್ಗೊಳ್ಳಲಿದೆ.
ಮೂರನೇ ತಂಡವನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮುನ್ನಡೆಸುವರು. ಈ ತಂಡ ಜ.11ರಂದು ಬೆಳಗಾವಿ-ಚಿಕ್ಕೋಡಿ, 12 ರಂದು ಬಾಗಲಕೋಟೆ-ಬಿಜಾಪುರ, 13 ರಂದು ಗದಗ-ಧಾರವಾಡ ಪ್ರವಾಸ ನಡೆಸಲಿದೆ.
ನಾಲ್ಕನೇ ತಂಡವನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮುನ್ನಡೆಸುವರು. ಈ ತಂಡ ಜ.11 ರಂದು ಬೀದರ್-ಕಲಬುರ್ಗಿ, 12 ರಂದು ಯಾದಗಿರಿ-ರಾಯಚೂರು, 13 ರಂದು ಬಳ್ಳಾರಿ-ಕೊಪ್ಪಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ.
ಐದನೇ ತಂಡವನ್ನು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ನೇತೃತ್ವ ವಹಿಸುವರು. ಈ ತಂಡ ಜ.11 ರಂದು ಹಾವೇರಿ-ದಾವಣಗೆರೆ, 12 ರಂದು ಚಿತ್ರದುರ್ಗ-ತುಮಕೂರು, 13 ರಂದು ಕೋಲಾರ-ಚಿಕ್ಕಬಳ್ಳಾಪುರ ಪ್ರವಾಸ ನಡೆಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ