ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ವಿಶ್ವಾಸ ಅಯೋಧ್ಯೆಯಲ್ಲಿ ಮುಂದಿನ ಮೂರೂವರೆ ವರ್ಷಗಳಲ್ಲಿ ಶ್ರೀರಾಮ ಮಂದಿರ ಸಾಕಾರ

ಮಂಗಳೂರು: ಅಯೋಧ್ಯೆಯಲ್ಲಿ ಮುಂದಿನ ಮೂರೂವರೆ ವರ್ಷಗಳಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ಸಾಕಾರಗೊಳ್ಳುವ ವಿಶ್ವಾಸವನ್ನು ಹೊಂದಲಾಗಿದೆ ಎಂದು ಉಡುಪಿ ಪೇಜಾವರ ಮಠದ ಯತಿಗಳು ಹಾಗೂ ಅಯೋಧ್ಯೆಯ ವಿಶ್ವಸ್ಥ ಮಂಡಳಿಯ ವಿಶ್ವಸ್ಥರಲ್ಲಿ ಒಬ್ಬರಾಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅವರು ನಗರದ ಪ್ರದೀಪಕುಮಾರ್ ಕಲ್ಕೂರ ಅವರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರದ ಮಾಹಿತಿಗಳನ್ನು ಹಂಚಿಕೊಂಡರು.
ನ.10 ಮತ್ತು 11ರಂದು ವಿಶ್ವ ಹಿಂದು ಪರಿಷತ್ತು ಮಾರ್ಗದರ್ಶಕ ಮಂಡಳಿ ಮತ್ತು ರಾಮ ಜನ್ಮ ಭೂಮಿ ಟ್ರಸ್ಟ್ ಸಭೆ ನಡೆದಿದೆ. ಅಯೋಧ್ಯೆಯ ಪುಣ್ಯ ನೆಲದಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣ ಆಗಬೇಕು ಎಂಬುದು ಭಾರತೀಯರ ಶತಮಾನದ ಕನಸು. ಹಲವು ಮಂದಿಯ ಬಲಿದಾನ ಮತ್ತು ಭಾರತೀಯರ ಅಪೇಕ್ಷೆಯ ಫಲವಾಗಿ ಶ್ರೀರಾಮಂದಿರದ ಕನಸು ನನಸಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಕೆತ್ತನೆಯ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಮಂದಿರದ ಹಿಂದಿನ ವಿಸ್ತೀರ್ಣಕ್ಕೆ ಒಂದು ಅಂತಸ್ತು ಸೇರಿಕೊಂಡಿದೆ. ಮಂದಿರ ನಿರ್ಮಾಣ ಪ್ರದೇಶದ ಧಾರಣಾ ಸಾಮಥ್ರ್ಯವನ್ನು ವಿಶ್ಲೇಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕಾದೀತು. ಮಂದಿರದ ನಿರ್ಮಾಣ ಕಾರ್ಯವನ್ನು ಎಲ್ ಆ್ಯಂಡ್ ಟಿ ಕಂಪೆನಿಗೆ ವಹಿಸಲಾಗಿದೆ. ಗುಣಮಟ್ಟವನ್ನು ಖಾತರಿ ಪಡಿಸುವ ಜವಾಬ್ದಾರಿಯನ್ನು ಟಾಟಾ ಕನ್ಸಲ್ಟೆನ್ಸಿಗೆ ವಹಿಸಲಾಗಿದೆ. ಧಾರಣಾ ಸಾಮಥ್ಯವನ್ನು ಇದೇ ಸಂಸ್ಥೆಗಳು ವಿಶ್ಲೇಷಿಸುತ್ತಿವೆ ಎಂದು ಶ್ರೀಗಳು ನುಡಿದರು.
ಸರ್ವ ರಾಮಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಅಯೋಧ್ಯೆಯಲ್ಲಿ ಮಂದಿರ ಸಾಕಾರಗೊಳ್ಳಬೇಕು ಎಂಬುದು ಟ್ರಸ್ಟ್‍ನ ಬಯಕೆಯಾಗಿದೆ. ಅದಕ್ಕಾಗಿ ದೇಶದೆಲ್ಲೆಡೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವ ಹಿಂದು ಪರಿಷತ್ತು ನೇತೃತ್ವದಲ್ಲಿ ರಾಮ ಭಕ್ತರಿಂದ ದೇಣಿಗೆ ಸಂಗ್ರಹ ಕಾರ್ಯ ನಡೆಯಲಿದೆ. ರೂ.10, ರೂ.100ರ ಕೂಪನ್ ಮತ್ತು ರೂ.2,000ದ ರಶೀದಿ ರೂಪದಲ್ಲಿ ದೇಣಿಗೆ ಸಂಗ್ರಹಿಸಲಾಗುವುದು ಎಂದು ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ನುಡಿದರು.
ಮುಂದಿನ ಮಕರ ಸಂಕ್ರಾಂತಿಯ ಪರ್ವ ದಿನದಿಂದ ಮುಂದಿನ 45 ದಿನಗಳ ಕಾಲ ದೇಶಾದ್ಯಂತ ಮಂದಿರಕ್ಕಾಗಿ ಕಾರ್ಯಕರ್ತರು ದೇಣಿಗೆ ಸಂಗ್ರಹಿಸುವರು. ಅದಕ್ಕಾಗಿ ವಿಶ್ವ ಹಿಂದು ಪರಿಷತ್ತು ಪ್ರಾದೇಶಿಕವಾಗಿ ಸಮಿತಿಗಳನ್ನು ರಚಿಸಲಿದೆ. ರಾಮ ಮಂದಿರ ನಿರ್ಮಾಣದೊಂದಿಗೆ ದೇಶದಲ್ಲಿ ರಾಮರಾಜ್ಯ ನಿರ್ಮಾಣಗೊಳ್ಳಬೇಕು. ಬದುಕೇ ಭಗವಂತನ ಆರಾಧನೆಯಾಗಬೇಕು. ಎಲ್ಲೆಡೆ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳಬೇಕು ಎಂಬುದು ಟ್ರಸ್ಟಿನ ಸದಾಶಯವಾಗಿದೆ ಎಂದು ಶ್ರೀಗಳು ಹೇಳಿದರು.
ಉಡುಪಿ ಗುಂಡಿಬೈಲಿನ ಸುಬ್ರಹ್ಮಣ್ಯ ಭಟ್, ಕುಡುಪು ಕೃಷ್ಣರಾಜ ತಂತ್ರಿ, ಕೇರಳದ ಓರ್ವರಲ್ಲದೆ ಉತ್ತರ ಭಾರತ ಇಬ್ಬರು ವಾಸ್ತು ತಜ್ಞರ ತಂಡ ವಾಸ್ತು ವಿನ್ಯಾಸವನ್ನು ನಿರ್ಧರಿಸಲಿ ಎಂದು ಅಭಿಪ್ರಾಯ ಪಡಲಾಗಿದೆ. ಜೊತೆಗೆ ವಾಸ್ತು ಶಿಲ್ಪಿಗಳು ತಮ್ಮ ಸಲಹೆ ಸೂಚನೆಗಳನ್ನು ನ.20ರೊಳಗೆ ತಿಳಿಸಲು ಕೋರಲಾಗಿದೆ ಎಂದು ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ನುಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂದಿರದಲ್ಲಿ ಪ್ರತಿಷ್ಠಾಪಿಸುವ ಶ್ರೀರಾಮನ ಮೂರ್ತಿಗೆ ಬೆಳಗ್ಗಿನ ಸೂರ್ಯ ರಶ್ಮಿ ಬೀಳುವಂತೆ ವಿನ್ಯಾಸಗೊಳಿಸುವುದು ಮತ್ತು ಶ್ರೀರಾಮಚಂದ್ರನಿಗೆ ನಮಸ್ಕರಿಸುವ ಸಂದರ್ಭದಲ್ಲಿ ಪಾದ ಸ್ಪರ್ಶಿಸುವ ಅನುಭವ ಕೊಡುವ ತ್ರಿಡಿ ಇಂಪಾಕ್ಟ್ ಅಳವಡಿಸುವಂತೆ ಸಲಹೆ ನೀಡಿದ್ದಾರೆ. ಅದನ್ನು ಟ್ರಸ್ಟ್ ಪರಿಗಣಿಸಿದೆ ಎಂದು ಶ್ರೀಗಳು ವಿವರಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಶ್ರೀಗಳು, ಈಗಾಗಲೇ ಅಯೋಧ್ಯೆಯಲ್ಲಿ ನೆಲ ಸಮತಟ್ಟು ಮಾಡುವ ಕಾರ್ಯ ಮುಗಿದಿದೆ. ಹಳೆಯ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ