ಅಯೋಧ್ಯೆ: ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತ ನಂತರ ಅಯೋಧ್ಯೆಯಲ್ಲಿ ಆಚರಿಸಲಾಗುತ್ತಿರುವ ಮೊದಲ ದೀಪಾವಳಿಯ ಪ್ರಯುಕ್ತ ನಗರಾದ್ಯಂತ ಸಂಭ್ರಮ ಮನೆಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದೀಪೊತ್ಸವ ಆಚರಣೆಗೆ ಚಾಲನೆ ನೀಡಿದ್ದು, ಶುಕ್ರವಾರ ಸರಯು ನದಿ ದಂಡೆಯಲ್ಲಿ 5.51 ಲಕ್ಷ ಹಣತೆಗಳ ಬೆಳಗಲಾಗಿದೆ.
ಅಲ್ಲದೇ ದೀಪಾವಳಿ ಹಬ್ಬ ಆಧರಿಸಿರುವ ತ್ರೇತಾ ಯುಗದ ಒಂದು ಘಟನೆಯನ್ನು ಮರುಸೃಷ್ಟಿಸಲು ಯತ್ನಿಸಲಾಗಿದ್ದು, ಶ್ರೀರಾಮ ಹಾಗೂ ಸೀತೆಯನ್ನು ಪುಷ್ಟಕ ವಿಮಾನದ ಮೂಲಕ ರಾಮಜನ್ಮಭೂಮಿಗೆ ಕರೆತರಲಾಯಿತು. ಇದರೊಂದಿಗೆ ರಾಮಾಯಣದ ಕತೆ ತಿಳಿಸುವ ಲೇಸರ್ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ದೀಪೊತ್ಸವ ಕಾರ್ಯಕ್ರಮಕ್ಕಾಗಿ ರಾಜ್ಯಪಾಲೆ ಆನಂದಿಬೇನ್ ಪಟೇಲ್ ಕೂಡ ಅಯೋಧ್ಯೆ ಆಗಮಿಸಿದ್ದು, ಯೋಗಿ ಹಾಗೂ ಆನಂದಿ ಬೇನ್ ಸೇರಿ ಒಟ್ಟು 7 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಇಂದಿನ ಪೀಳಿಗೆ ರಾಮಮಂದಿರ ನಿರ್ಮಾಣ ಆರಂಭವಾಗಿರುವುದನ್ನು ನೋಡುವ ಜತೆಗೆ ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲೂ ಭಾಗಿಯಾಗುವ ಭಾಗ್ಯ ಹೊಂದಿದೆ. ಏಕೆಂದರೆ ರಾಮ ಮಂದಿರ ನಿರ್ಮಾಣದ ಕನಸು ಕಾಣುತ್ತಲೇ ದೇಶದ ಲಕ್ಷಾಂತರ ಸಾಧುಗಳು ಅಸುನೀಗಿದ್ದಾರೆ. ಹಾಗಾಗಿ ರಾಮ ರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಪ್ರಧಾನಿ ಮೋದಿ ನನ್ನ ವಿಶೇಷ ಧನ್ಯವಾದಗಳು ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ರಾಮಮಂದಿರ ಶಿಲಾನ್ಯಾಸ ನೆರವೇರಿಸಿಕೊಟ್ಟಿದ್ದರು.