ಅಭಿವೃದ್ಧಿ ಕಾರ್ಯವನ್ನು ಜನ ಮರೆಯುವುದಿಲ್ಲ: ಕಟೀಲು ಬಿಎಸ್‍ವೈ ಆಡಳಿತ ಮೆಚ್ಚಿದ ಜನತೆ

ಮಂಗಳೂರು; ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯವನ್ನು ಜನತೆ ಗುರುತಿಸಿರುವುದಕ್ಕೆ ಉಪ ಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತವನ್ನು ಜನತೆ ಮೆಚ್ಚಿದ್ದಾರೆ. ಅವರು ಸರ್ವಸಮ್ಮತ ನಾಯಕ ಎಂಬುದನ್ನು ಈ ಚುನಾವಣೆಯೂ ತೋರಿಸಿಕೊಟ್ಟಿದೆ ಎಂದರು.
ಕಾಂಗ್ರೆಸ್‍ಗೆ ತಕ್ಕ ಉತ್ತರ:
ಉಪ ಚುನಾವಣೆ ವೇಳೆ ಕಾಂಗ್ರೆಸ್ ಜಾತಿ, ಹಣ, ಗೂಂಡಾ ರಾಜಕಾರಣ ನಡೆಸಿದೆ. ಬಿಜೆಪಿ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿತ್ತು. ಆದರೆ, ಜನತೆ ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಇನ್ನಾದರೂ ಜನತೆಯ ಉತ್ತರವನ್ನು ಸ್ವೀಕಾರ ಮಾಡುವುದು ಉತ್ತಮ ಎಂದು ಹೇಳಿದರು.
ಕಾಂಗ್ರೆಸ್‍ನಿಂದ ಸಂಪತ್ ರಾಜ್ ರಕ್ಷಣೆ:
ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಸಂಪತ್‍ರಾಜ್ ಮೇಲೆ ಪ್ರಕರಣ ದಾಖಲಾಗಿದ್ದರೂ ಕಾಂಗ್ರೆಸ್ ಅವರನ್ನು ರಕ್ಷಿಸುತ್ತಿದೆ. ಕಾಂಗ್ರೆಸ್‍ನ ಇಬ್ಬರು ನಾಯಕರ ಪ್ರತಿಷ್ಠೆಯ ಗಲಭೆ ಇದಾಗಿತ್ತು. ಅಖಂಡ ಶ್ರೀನಿವಾಸ ಮೂರ್ತಿ ಸಿದ್ದರಾಮಯ್ಯ ಅವರ ಬೆಂಬಲಿಗ. ಸಂಪತ್‍ರಾಜ್ ಡಿ.ಕೆ.ಶಿವಕುಮಾರ್ ಬೆಂಬಲಿಗನಾಗಿದ್ದಾರೆ. ಈ ಇಬ್ಬರು ಬೆಂಬಲಿಗರ ನಡುವೆ ಗಲಭೆಯಾಗಿದೆ. ಕಾಂಗ್ರೆಸ್ ಕಾನೂನಿಗೆ ಗೌರವ ನೀಡುತ್ತದೆ ಎಂದಾದರೆ ಸಂಪತ್‍ರಾಜ್‍ನನ್ನು ಶರಣಾಗತಿಯಾಗಲು ಹೇಳಬೇಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ