ಹೊಸದಿಲ್ಲಿ: ಹಲವು ಭಾಗಗಳಲ್ಲಿ ತುಕ್ಕು ಹಿಡಿದಿರುವ, ಬಿರುಕು ಬಿಟ್ಟಿರುವ, ಬೆಸುಗೆ ಇರುವ …ಇದು ಪಾಕಿಸ್ಥಾನದ ಶೇ. 40 ಯುದ್ಧ ವಿಮಾನಗಳಿರುವ ಸ್ಥಿತಿ.
ಸದಾ ಭಾರತದೊಂದಿಗೆ ಕಾಶ್ಮೀರ ವಿಚಾರವಾಗಿ ಕಾಲುಕೆರೆದುಕೊಂಡು ಕ್ಯಾತೆ ತೆಗೆಯುವ ಪಾಕಿಸ್ಥಾನದ ಶೇ.40 ಮುಂಚೂಣಿ ಯುದ್ಧ ವಿಮಾನಗಳು ಕೆಲಸಕ್ಕೆ ಬಾರದ ಸ್ಥಿತಿಯಲ್ಲಿವೆ. ಮುಖ್ಯವಾಗಿ ಗುರುತ್ವಾಕರ್ಷಣೆಗೆ ಸಂಬಂಸಿದ ಒತ್ತಡಗಳಿಂದಾಗಿ ಹೆಚ್ಚಿನ ವಿಮಾನಗಳು ಇಂತಹ ಸ್ಥಿತಿಗೆ ತಲುಪುತ್ತವೆ.
ಅದರಲ್ಲಿಯೂ ಮುಂಚೂಣಿ ಯುದ್ಧವಿಮಾನಗಳಲ್ಲಿ ಇಂತಹ ಲೋಪಗಳು ಕಂಡುಬಂದಿವೆ ಎಂದರೆ, ಪಾಕ್ ಸೇನೆಯ ಸ್ಥಿತಿ ಅನಾವರಣವಾಗುತ್ತದೆ. ಚೀನಾದ ಪ್ರಮುಖ ವಿಮಾನವಾದ ಜೆ-20ಯಲ್ಲಿಯೂ ಇಂತಹುದೇ ಸಮಸ್ಯೆ ಕಂಡುಬಂದಿದೆ.
ಮೂಲೆ ಸೇರಿವೆ ಜೆಎಫ್-17
ಶೇ. 40 ಜೆಎಫ್-17 ಯುದ್ಧ ವಿಮಾನಗಳು ತುಕ್ಕು, ಬೆಸುಗೆ, ಬಿರುಕಿನಂತಹ ಹಲವು ಕಾರಣಗಳಿಂದಾಗಿ ಪಾಕ್ ವಾಯು ಪಡೆಯ ಎರಡು ನೆಲೆಗಳಲ್ಲಿ ಮೂಲೆ ಸೇರಿವೆ. ಅಲ್ಲದೆ, ಈ ಸಮಸ್ಯೆಗಳು ವಿಮಾನ ರಚನೆಗೆ ಸಂಬಂಸಿದ್ದಾಗಿರುವುದರಿಂದ ಇವುಗಳಿಗೆ ತ್ವರಿತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
ಪಾಕ್ ವಾಯುಪಡೆಯಲ್ಲಿರುವ ಜೆಎಫ್-17 ವಿಮಾನದ ಮೇಲ್ಭಾಗದ ವಿದ್ಯುತ್ ವ್ಯವಸ್ಥೆಯು ಅಸಮರ್ಪಕವಾಗಿದೆ. ಇಂತಹುದೇ ಸ್ಥಿತಿ ಎರಡು ಸೀಟಿನ ಜೆಎಫ್-17ಬಿ ವಿಮಾನದಲ್ಲಿಯೂ ಇದ್ದು, ಅಪಾಯಕ್ಕೆ ಎಡೆಯಾಗುತ್ತದೆ. ಇಂತಹ ಸ್ಥಿತಿಯಲ್ಲಿರುವ ವಿಮಾನಗಳು ಕಾರ್ಯಾಚರಣೆ ನಡೆಸುವುದು ಸುಲಭದ ಮಾತಲ್ಲ.
ಸರಿಪಡಿಸಲಾಗದ ಸ್ಥಿತಿ
ವಿಮಾನಗಳಲ್ಲಿ ಬಿರುಕು ಬಿಟ್ಟಿರುವುದು, ತುಕ್ಕು ಹಿಡಿದಿರುವುದು ಸೇರಿದಂತೆ ಸಾಕಷ್ಟು ಸರಿ ಪಡಿಸಲಾಗದ ಸಮಸ್ಯೆಗಳಿವೆ. ಅದರಲ್ಲಿಯೂ ವಿಮಾನದ ಪ್ರಮುಖ ಭಾಗವೆಂದೆ ಪರಿಗಣಿಸಲಾಗುವ ರೆಕ್ಕೆಗಳಿಗೆ ಬೆಸುಗೆ ಮಾಡಲಾಗಿದೆ ಎಂದರೆ ಪಾಕ್ ವಾಯುಪಡೆಯಲ್ಲಿರುವ ಯುದ್ಧ ವಿಮಾನಗಳು ಎಂತಹವುಗಳು ಎನ್ನುವುದು ತಿಳಿಯುತ್ತದೆ.
ವಿಮಾನ ಹಾರುವ ಸಮಯದಲ್ಲಿ ಉಂಟಾಗುವ ಒತ್ತಡದಿಂದಾಗಿ ಇಂತಹ ಸಮಸ್ಯೆಗಳು ಉಂಟಾಗುತ್ತವೆ.
ಇನ್ನು ಜೆಎಫ್-17 ಯುದ್ಧ ವಿಮಾನದ ಆ್ಯಂಕರ್ ಸಹ ಬಿರುಕಿನಿಂದ ಕೂಡಿದ್ದು, ಇದು ವಿಮಾನ ರಚನೆಯ ದುರ್ಬಲತೆಯ ಮತ್ತೊಂದು ಚಿಹ್ನೆಯಾಗಿದೆ. ವಿಮಾನದ ರಡಾರ್ ಮತ್ತು ಅದಕ್ಕೆ ಹೊಂದಿಕೊಂಡಿರುವ ಉಪಕರಣವು ಭಾರೀ ತೂಕದ್ದಾಗಿದೆ. ಯುದ್ಧ ವಿಮಾನಕ್ಕೆ ಇಷ್ಟೊಂದು ತೂಕದ ಉಪಕರಣವನ್ನು ಅಳವಡಿಸಲಾಗುವುದಿಲ್ಲ.