ಬೆಂಗಳೂರು: ವಿದೇಶಿ ನೇರ ಹೂಡಿಕೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿ ಉದ್ಯಮಿಗಳಿಗೆ ನೆಚ್ಚಿನ ತಾಣವಾಗಿದೆಯಲ್ಲದೇ ಕೊರೋನಾ ಸಂದರ್ಭದಲ್ಲೂ ಕೈಗಾರಿಕಾ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು ಹೂಡಿಕೆದಾರರಿಗೆ ಎಲ್ಲಾ ರೀತಿಯ ಸಹಕಾರ ರಾಜ್ಯ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ಸಾರ್ವಜನಿಕ ವ್ಯವಹಾರಗಳ ವೇದಿಕೆ (ಪಾಫಿ) ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಲಾಕ್ಡೌನ್ ನಡುವೆಯೂ ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಾಕಷ್ಟು ಸುಧಾರಣಾ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿದೆ.
ರಾಜ್ಯದಲ್ಲಿ ನೂತನ ಕೈಗಾರಿಕಾ ನೀತಿ ಪರಿಚಯಿಸಿದೆ. ಉದ್ಯಮಿಗಳಿಗೆ, ಹೂಡಿಕೆದಾರರಿಗೆ ಇದರ ಆಧಾರದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳ ಆಕರ್ಷಣೆಗೆ ಸಹಕರಿಸಬೇಕು. ಐಟಿ, ಐಟಿಇಎಸ್ ಸೇವೆಗಳು, ಮೆಷಿನ್ ಟೂಲಿಂಗ್, ಉತ್ಪಾದನೆ, ಏರೋಸ್ಪೇಸ್, ಜೈವಿಕ ತಂತ್ರe್ಞನ ಹಾಗೂ ಎಂಜನಿಯರಿಂಗ್ ವಿನ್ಯಾಸ ಸೇರಿದಂತೆ ಕರ್ನಾಟಕದಲ್ಲಿ ಹೂಡಿಕೆಗೆ ಅವಕಾಶ ಇರುವ ಉದ್ಯಮಗಳ ಬಗ್ಗೆ ವಿವರಿಸಿದರು.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ 2020-2025 ಜಾರಿಗೆ ತಂದಿದೆ. ರಾಜ್ಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ನೀತಿ ನೆರವಾಗಲಿದೆ. ಉದ್ದಿಮೆಗೆ ಪೂರಕವಾದ ಭತ್ಯೆ ಸೇರಿದಂತೆ ಭೂಮಿ ಲಭ್ಯತೆ, ಕಾರ್ಮಿಕ ಕಾನೂನಿನ ಸುಧಾರಣೆ ಹಲವು ನಿಯಂತ್ರಕ ಸುಧಾರಣೆಗಳನ್ನು ಈ ನೀತಿ ಒಳಗೊಂಡಿದೆ. ಹೂಡಿಕೆ ಮಾಡಲು ಬರುವ ಹೂಡಿಕೆದಾರರಿಗೆ ಸರ್ಕಾರ ಸೂಕ್ತ ಬೆಂಬಲ ನೀಡಲಿದೆ ಎಂದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಂ. ರೇವಣ್ಣಗೌಡ, ಜ್ಯುಬಿಲಿಯಂಟ್ ಭಾರತೀಯ ಗ್ರೂಪ್ನ ಅಜಯ್ ಖನ್ನಾ, ಪಾಫಿ ಅಧ್ಯಕ್ಷ ಇಶ್ತೇಯಾಕ್ ಅಮ್ಜಾದ್, ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್, ಯುಎಸ್ಐಬಿಸಿ ಅಧ್ಯಕ್ಷೆ ನಿಶಾ ಬಿಸ್ವಾಲ್, ಕೋಟಕ್ ಮಹೀಂದ್ರಾದ ಉದಯ್ ಕೋಟಕ್ ಪಾಫಿ ಉಪಾಧ್ಯಕ್ಷ ಸುಭೋ ರಾಯಸೇರಿದಂತೆ ಮತ್ತಿತರರು ಹಾಜರಿದ್ದರು.