ಹೊಸದಿಲ್ಲಿ: ಭಾರತದ ವಿಷಯದಲ್ಲಿ ಐಸಿಸ್ ಉಗ್ರ ಸಂಘಟನೆಯ ಮತ್ತೊಂದು ಕುತಂತ್ರ ಬಯಲಾಗಿದ್ದು, ದೇಶದ ಮುಸ್ಲಿಮರಿಗೆ ಜಿಹಾದ್ ಸಾರಲು ಸಂಘಟನೆ ಕರೆ ನೀಡಿದೆ. ಬಾಬ್ರಿ ಮಸೀದಿ ವಿಚಾರವಾಗಿ ಪ್ರತಿಕಾರ ತೀರಿಸಿಕೊಳ್ಳುವ ಅಗತ್ಯವಿದ್ದು,ಎಲ್ಲ ಮುಸ್ಲಿಮರು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಬೇಕು ಎಂದು ಐಸಿಸ್ ತನ್ನ ಆನ್ಲೈನ್ ಮ್ಯಾಗಜಿನ್ನಲ್ಲಿ ಹತ್ತಾರು ಲೇಖನ ಪ್ರಕಟಿಸಿದೆ. ಈ ಮೂಲಕ ಭಾರತದಲ್ಲಿ ಕೋಮುಗಲಭೆ ಉಂಟುಮಾಡಲು ಯತ್ನಿಸಿದ್ದು, ದೇಶದ ವಿರುದ್ಧವೇ ಮುಸ್ಲಿಮರನ್ನು ಎತ್ತಿಕಟ್ಟುವ ಪಿತೂರಿ ನಡೆಸಿದೆ.
ಬಾಬ್ರಿ ಮಸೀದಿ ಘಟನೆ ಕುರಿತಂತೆ ಮುಸ್ಲಿಮರು ಶಸ್ತ್ರಾಸ್ತ್ರ ಹಿಡಿದು, ಭಾರತ ಸರ್ಕಾರದ ವಿರುದ್ಧ ಜಿಹಾದ್ ಸಾರಬೇಕು ಎಂದು ಐಸಿಸ್ ಉಗ್ರರು ಕರೆ ನೀಡಿರುವ ದೃಶ್ಯಾವಳಿಯೂ ಯುಟ್ಯೂಬ್ನಲ್ಲಿ ಹರಿದಾಡುತ್ತಿದೆ. ಜತೆಗೆ ಯಾವ ಮುಸ್ಲಿಮರು ಐಸಿಸ್ ಕರೆಗೆ ಓಗೊಡುವುದಿಲ್ಲವೋ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಬೆದರಿಕೆ ಒಡ್ಡಿದೆ.
ಅಲ್ಲದೇ ನೆರೆ ರಾಷ್ಟ್ರಗಳ ಹಿಂದೂ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಿರುವ 2019ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಸಿ ಮುಸ್ಲಿಮರು ನಡೆಸಿದ್ದ ಪ್ರತಿಭಟನೆಗೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ವಾಯ್ಸ್ ಆಫ್ ಹಿಂದ್ ನಿಯತಕಾಲಿಕದಲ್ಲಿ ಐಸಿಸ್ ಘೋಷಿಸಿಕೊಂಡಿದೆ. ವಾಯ್ಸ್ ಆಫ್ ಹಿಂದ್ ಐಸಿಸ್ನ ಜಿಹಾದಿ ನಿಯತಕಾಲಿಕವಾಗಿದ್ದು, ಟಿಲಿಗ್ರಾಂ ಆ್ಯಪ್ ಮೂಲಕ ಅಕ್ರಮವಾಗಿ ಗೌಪ್ಯ ಮುಸ್ಲಿಂ ಗ್ರೂಪ್ಗಳಿಗೆ ಲೇಖನಗಳನ್ನು ಹರಿಬಿಡಲಾಗುತ್ತದೆ.
ಇನ್ನು ಕಳೆದ ತಿಂಗಳು ಐಸಿಸ್ ದಕ್ಷಿಣ ಭಾರತದ ಕೆಲ ಅರಣ್ಯ ಪ್ರದೇಶದಲ್ಲಿ ತನ್ನ ಘಟಕಗಳನ್ನು ಸ್ಥಾಪಿಸಲು ಸಂಚು ರೂಪಿಸಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಹಿರಂಗಗೊಳಿಸಿತ್ತು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳದ ದಟ್ಟ ಅರಣ್ಯಗಳಲ್ಲಿ ಐಸಿಸ್ ದೈಷ್ವಿಲಯಾ ಪ್ರಾಂತ್ಯ ನಿರ್ಮಿಸಲು ಮುಂದಾಗಿತ್ತು ಎಂದು ಎನ್ಐಎ ಚಾರ್ಜ್ಶೀಟ್ ಸಹ ಸಲ್ಲಿಸಿತ್ತು.