ನವದೆಹಲಿ: ಕೊರೋನಾ ವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಮೊರಾಟೋರಿಯಂ ಅವಧಿಯಲ್ಲಿನ ಸಾಲ ಮರುಪಾವತಿ ಮೇಲಿನ ಬಡ್ಡಿಯನ್ನು ಸರ್ಕಾರ ಆದಷ್ಟೂ ಶೀಘ್ರದಲ್ಲಿ ಮನ್ನಾಗೊಳಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿಯ ಮೇಲಿನ ಬಡ್ಡಿ ಹಾಗೂ ಮಾರ್ಚ್ 27 ರಂದು ಹೊರಡಿಸಲಾದ ಆರ್ಬಿಐ ಅಧಿಸೂಚನೆಯ ಕೆಲವು ಭಾಗವನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿದೆ. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಂ.ಆರ್. ಶಾ, ಆರ್. ಸುಭಾಷ್ ರೆಡ್ಡಿ ಇರುವ ಸುಪ್ರೀಂ ನ್ಯಾಯಪೀಠ, ನವೆಂಬರ್ 2ಕ್ಕೆ ಮತ್ತೆ ವಿಚಾರಣೆ ಮುಂದೂಡಿದೆ. ಆದರೆ, ಅಷ್ಟರೊಳಗೆ ಸರ್ಕಾರ ಬಡ್ಡಿ ಮನ್ನಾ ಮಾಡುವ ಕುರಿತು ಕ್ರಿಯಾ ಯೋಜನೆ ರೂಪಿಸಬೇಕು ಎಂದು ತಿಳಿಸಿತು.
ಸರ್ಕಾರ ಕೂಡ ಮೊರಾಟೋರಿಯಂ ಅವಧಿಯಲ್ಲಿನ ಇಎಂಐ ಮೇಲಿನ ಬಡ್ಡಿ ಮನ್ನಾಗೆ ಒಪ್ಪಿಕೊಂಡಿದೆ. ಆದರೆ, ವಿಭಿನ್ನ ನೆಲೆಗಳ ಅನುಸಾರ ವಿವಿಧ ಸಾಲಗಳನ್ನ ನೀಡಲಾಗಿದೆ. ಸಂಬಂಧಪಟ್ಟ ಸಂಸ್ಥೆಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಬ್ಯಾಂಕುಗಳು ಚಕ್ರಬಡ್ಡಿಯನ್ನ ಮನ್ನಾ ಮಾಡುತ್ತದೆ. ಈ ಹಣವನ್ನು ಸರ್ಕಾರ ಭರಿಸುತ್ತದೆ. ಈ ಲೆಕ್ಕಾಚಾರ ಬೇರೆ ಬೇರೆ ವಿಧಾನಗಳಲ್ಲಿ ಮಾಡಲಾಗುತ್ತದೆ. ಬ್ಯಾಂಕು ನಮಗೆ ಸರಿಯಾದ ಮಾದರಿಯನ್ನ ಒದಗಿಸಬೇಕಾಗುತ್ತದೆ. ಇದಕ್ಕೆಲ್ಲಾ ಸಮಯ ಹಿಡಿಯುತ್ತದೆ ಎಂದು ಸರ್ಕಾರದ ಪರ ವಕೀಲರು ಸಮಯಾವಕಾಶ ಕೋರಿದರು. ಆದರೆ, ಇದಕ್ಕೆಲ್ಲಾ ತಿಂಗಳುಗಟ್ಟಲೆ ಸಮಯ ಯಾಕೆ ಬೇಕು? ಈಗಲೇ ಕ್ರಮ ತೆಗೆದುಕೊಳ್ಳಿ. ನವೆಂಬರ್ 2ರೊಳಗೆ ನಿಮ್ಮ ಕಾರ್ಯಪಟ್ಟಿ ತಯಾರಿಸಿಕೊಂಡು ಬನ್ನಿ ಎಂದು ನ್ಯಾಯಪೀಠ ಆದೇಶಿಸಿತು. ಇದಕ್ಕೆ ಸರ್ಕಾರ ಕೂಡ ಒಪ್ಪಿಕೊಂಡಿತು.
ಅಸಲಿಗೆ ಈ ಪ್ರಕರಣದ ವಿಚಾರಣೆ ನಿನ್ನೆಯೇ ನಡೆಯಬೇಕಿತ್ತು. ಆದರೆ, ನ್ಯಾಯಮೂರ್ತಿಗಳು ಕೆಲವು ಕಾರಣಾಂತರಗಳಿಂದ ವಿಚಾರಣೆಯನ್ನು ಇವತ್ತಿಗೆ (ಅಕ್ಟೋಬರ್ 14ಕ್ಕೆ) ಮುಂದೂಡಿದ್ದರು. ಈಗ ನವೆಂಬರ್ 2ಕ್ಕೆ ವಿಚಾರಣೆ ಮುಂದುವರಿಯಲಿದೆ.
ಕೊರೋನಾ ಲಾಕ್ಡೌನ್ ವೇಳೆ ಸತತ ಆರು ತಿಂಗಳ ಕಾಲ ಕೇಂದ್ರ ಸರ್ಕಾರ ಸಾಲಗಳ ಮೇಲಿನ ಇಎಂಐಗಳಿಗೆ ವಿನಾಯಿತಿ ನೀಡಿತ್ತು. ಆದರೆ, ಈ ಮೊತ್ತದ ಮೇಲೆ ಬಡ್ಡಿಯನ್ನೂ ನಿಗದಿಪಡಿಸಿತ್ತು. ಆದರೆ, ಇಎಂಐ ಮೊತ್ತದ ಮೇಲೆ ಬಡ್ಡಿ ಹೇರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋಟ್ರ್ನಲ್ಲಿ ಪ್ರಶ್ನೆ ಮಾಡಲಾಗಿತ್ತು. ಅಲ್ಲದೆ, ಈ ಕುರಿತು ಸೆಪ್ಟೆಂಬರ್ 2 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಚಕ್ರಬಡ್ಡಿ ವಿಧಿಸುವ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿತ್ತು.
“ಕೇಂದ್ರ ಸರ್ಕಾರ ಕೊರೋನಾ ಕಾರಣದಿಂದಾಗಿ ಇಡೀ ದೇಶವನ್ನು ಲಾಕ್ಡೌನ್ ಮಾಡಿದ ಕಾರಣಕ್ಕೆ ಇಂತಹ ಪರಿಸ್ಥಿತಿ ಸಂಭವಿಸಿದೆ. ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗಿರುವ ಪರಿಣಾಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಗಲಿ, ಸರ್ಕಾರವಾಗಲಿ ಮರೆಮಾಡಲು ಸಾಧ್ಯವಿಲ್ಲ. ಬ್ಯಾಂಕುಗಳು ಕೇವಲ ವ್ಯವಹಾರಗಳ ಮೇಲೆ ಮಾತ್ರ ಆಸಕ್ತಿ ಹೊಂದುವ ಬದಲು ಜನರ ನೋವುಗಳನ್ನೂ ಆಲಿಸುವುದು ಸೂಕ್ತ” ಎಂದು ಕೋರ್ಟ್ ಕಿಡಿಕಾರಿತ್ತು.
ಸರ್ಕಾರದ ಎದುರು ಕಟು ಪ್ರಶ್ನೆಗಳನ್ನಿಟ್ಟಿದ್ದ ನ್ಯಾಯಮೂರ್ತಿ ಅಶೋಕ್ ಭೂಷಣ್, “ಇದು ಕೇವಲ ವ್ಯವಹಾರ ಬಗ್ಗೆ ಮಾತ್ರ ಪರಿಗಣಿಸುವ ಸಮಯವಲ್ಲ. ಬದಲಾಗಿ ಜನರ ದುಸ್ಥಿತಿಯ ಬಗ್ಗೆ ಸರ್ಕಾರ ಗಮನವಹಿಸಬೇಕಿದೆ. ಹೀಗಾಗಿ ಸರ್ಕಾರ ನ್ಯಾಯಾಲಯಕ್ಕೆ ಎರಡು ವಿಚಾರದ ಬಗ್ಗೆ ಸ್ಪಷ್ಟತೆ ನೀಡಬೇಕು. ನೀವು ರಾಷ್ಟ್ರೀಯ ವಿಪತ್ತನ್ನು ನಿರ್ವಹಣೆ ಮಾಡುತ್ತೀರಾ? ಅಥವಾ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿ ಮೇಲಿನ ಬಡ್ಡಿಗೆ ಮತ್ತಷ್ಟು ಬಡ್ಡಿಯನ್ನು ಸೇರಿಸುವ ಕುರಿತು ಲೆಕ್ಕ ಹಾಕುತ್ತೀರ?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಅಲ್ಲದೆ, “ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದ್ದರೂ ಈ ಕುರಿತು ತನ್ನ ನಿಲುವನ್ನು ಸರ್ಕಾರ ಈವರೆಗೆ ಸ್ಪಷ್ಟಪಡಿಸಿಲ್ಲ. ಹೀಗಾಗಿ ಸೆಪ್ಟೆಂಬರ್ 1ರ ಒಳಗಾಗಿ ಸರ್ಕಾರ ಈ ಕುರಿತು ಕೋರ್ಟ್ಗೆ ಸ್ಪಷ್ಟೀಕರಣ ನೀಡಬೇಕು” ಎಂದು ಕಾಲಾವಕಾಶ ನೀಡಲಾಗಿತ್ತು.
ಅದರಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋಟ್ರ್ಗೆ ಮೊರಟೋರಿಯಂ ಅವಧಿಯ ಬಡ್ಡಿ ಕುರಿತು ಸ್ಪಷ್ಟೀಕರಣ ನೀಡಿದ್ದು ಕೋರ್ಟ್ ಈ ಸಂಬಂಧ ವಿಚಾರಣೆಯನ್ನು ಮುಂದೂಡಿತ್ತು.