ಹೊಸದಿಲ್ಲಿ: ಪ್ರತಿಭಟನೆಗಳಿಗಾಗಿ ಸಾರ್ವಜನಿಕ ಸ್ಥಳಗಳನ್ನು ದೀರ್ಘಕಾಲದವರೆಗೆ ಆಕ್ರಮಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ತಿಳಿಸುವ ಮೂಲಕ ಸುಪ್ರೀಂ ಕೋರ್ಟ್ ಶಹೀನ್ ಬಾಗ್ ಪ್ರತಿಭಟನೆಯ ಕಾನೂನು ಬದ್ಧತೆ ಕುರಿತು ಬುಧವಾರ ಮಹತ್ವದ ತೀರ್ಪು ನೀಡಿದೆ.
ಕಳೆದ ಡಿಸೆಂಬರ್‍ನಿಂದ ಶಹೀನ್ ಬಾಗ್‍ನಲ್ಲಿ ದೀರ್ಘಕಾಲದವರೆಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಸಿ ನಡೆದ ಪ್ರತಿಭಟನೆ ಹಕ್ಕು ಚಲಾಯಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯ ಸ್ವೀಕಾರಾರ್ಹವಲ್ಲ ಎಂದಿದೆ. ಅದೇ ರೀತಿ ಪ್ರತಿಭಟನೆಗಳು ಶಹೀನ್ ಬಾಗ್‍ನಲ್ಲೇ ಆಗಲಿ ಅಥವಾ ಇತರೆ ಸಾರ್ವಜನಿಕ ಸ್ಥಳಗಳಲ್ಲಿಯೇ ಆಗಲಿ ಅನಿರ್ದಿಷ್ಟ ಕಾಲದವರೆಗೆ ಸ್ಥಳಗಳನ್ನು ಆಕ್ರಮಿಸಿಕೊಳ್ಳುವಂತಿಲ್ಲ ಎಂದು ಹೇಳಿದೆ.
ಸಿಎಎ ವಿರೋಸಿ ನಡೆದ ಪ್ರತಿಭಟನೆ ವೇಳೆ ಶಹೀನ್ ಬಾಗ್ ಪ್ರದೇಶದ ಸಾರ್ವಜನಿಕ ರಸ್ತೆಗಳನ್ನು ತೆರವುಗೊಳಿಸುವಲ್ಲಿ ದಿಲ್ಲಿ ಪೊಲೀಸರು ಮತ್ತು ಆಡಳಿತ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ವಕೀಲ ಅಮಿತ್ ಸಾಹ್ನಿ ಸಲ್ಲಿಸಿದ್ದ ಅರ್ಜಿ ಬಗ್ಗೆ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯ ಪೀಠ ತನ್ನ ತೀರ್ಪು ನೀಡಿದೆ.