ಬೇನಾಮಿ ಆಸ್ತಿ ತಡೆ ಕಾಯ್ದೆಯಲ್ಲಿ ಶಶಿಕಲಾ ವಿರುದ್ಧ ಕ್ರಮ 2,000 ಕೋಟಿ ಮೌಲ್ಯ ಆಸ್ತಿ ಜಪ್ತಿ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಸಹಾಯಕಿಯಾಗಿದ್ದ ಶಶಿಕಲಾಗೆ ಸೇರಿದ 2,000 ಕೋಟಿ ರೂ. ಮೊತ್ತದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಬುಧವಾರ ಜಪ್ತಿ ಮಾಡಿದೆ.
ಬೇನಾಮಿ ಆಸ್ತಿ ತಡೆ ಕಾಯ್ದೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಿರುಥಾರ್ವೂ ಮತ್ತು ಕೊಡನಾಡುವಿನಲ್ಲಿರುವ 300 ಕೋಟಿ ರೂ. ಮೌಲ್ಯದ ಆಸ್ತಿಯೂ ಜಪ್ತಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದ  ಆಸ್ತಿಗಳು ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಹೆಸರಿನಲ್ಲಿವೆ.
ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ, ನಾಲ್ಕು ವರ್ಷಗಳ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾದ ನಂತರ ವಾಸವಾಗಿರಬೇಕೆಂದುಕೊಂಡಿದ್ದ ಬಂಗಲೆಯನ್ನು ಕೂಡಾ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 2017ರಿಂದಲೂ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ನಾಲ್ಕು ವರ್ಷ ಜೈಲು ಶಿಕ್ಷೆಗೊಳಗಾಗಿದ್ಧಾರೆ.
.
2017ರ ನವೆಂಬರ್‍ನಲ್ಲಿ ಆದಾಯ ತೆರಿಗೆ ಇಲಾಖೆ ಇವರ ನಿವಾಸದ ಮೇಲೆ ದಾಳಿ ನಡೆಸಿ ಬರೋಬ್ಬರಿ 16 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು. ದೇಶದಲ್ಲಿ ಬಹುಮೌಲ್ಯದ ನೋಟು ಅಮಾನ್ಯವಾದ ಬಳಿಕ ಶಶಿಕಲಾ ಒಟ್ಟು 9 ಆಸ್ತಿಗಳನ್ನು ಖರೀದಿ ಮಾಡಿದ್ದರು ಎಂದು ತಿಳಿದುಬಂದಿತ್ತು. ಹೀಗಾಗಿ 150 ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆ ಹಾಗೂ ಅಪಾರ ಪ್ರಮಾಣದ ಅಕ್ರಮ ಆಸ್ತಿ ವಶಕ್ಕೆ ಪಡೆದುಕೊಂಡಿತ್ತು. ಜತೆಗೆ ಬೇನಾಮಿ ಆಸ್ತಿ ವಹಿವಾಟು ಕಾಯ್ದೆಯಲ್ಲಿ ಶಶಿಕಲಾ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿತ್ತು.
ಈ ಸಂದರ್ಭದಲ್ಲಿ 1,500 ಕೋಟಿ ರೂಪಾಯಿ ಆದಾಯ ತೆರಿಗೆ ವಂಚನೆ ಪತ್ತೆಯಾಗಿತ್ತು. ಅಲ್ಲದೇ 7 ಕೋಟಿ ರೂಪಾಯಿ ನಗದು, 5 ಕೋಟಿ ಮೌಲ್ಯದ ಆಭರಣಗಳನ್ನು ಅಕಾರಿಗಳು ವಶಪಡಿಸಿಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ