ಮಾಮಲ್ಲಪುರಂ: ಚೆನ್ನೈ ಸಂಪರ್ಕದೊಂದಿಗೆ ಭಾರತ-ಚೀನಾ ನಡುವೆ ಸಹಕಾರದ ಹೊಸ ಯುಗ ಆರಂಭವಾಗಲಿದೆ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎರನಡೇ ಅನೌಪಚಾರಿಕ ಶೃಂಗ ಸಭೆಯ ಭಾಗವಾಗಿ ಪ್ರಾಚೀನ ಕರಾವಳಿ ಪಟ್ಟಣದಲ್ಲಿ ಶುಕ್ರವಾರ ಮತ್ತು ಶನಿವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ರೊಂದಿಗೆ ಪ್ರಧಾನಿ ಮೋದಿ ಸುಮಾರು ಐದೂವರೆ ತಾಸು ಕಾಲ ಮುಖಾಮುಖಿ ಮಾತುಕತೆ ನಡೆಸಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳ ಕುರಿತಾಗಿ ಕ್ಸಿ ಮತ್ತು ಮೋದಿ ಮುಚ್ಚು ಮರೆಯಿಲ್ಲದೆ ಚರ್ಚಿಸಿದ್ದರು. ಬಿಚ್ಚು ಮನಸ್ಸಿನಿಂದ ಅವರಿಬ್ಬರು ಅಂತರಂಗ ಮುಟ್ಟುವ ಮಾತನ್ನಾಡಿದ್ದರು. ಚೀನಾ ಭಾರತ ಸಂಬಂಧ ತನ್ನ ಸರಕಾರದ ದೃಢ ನೀತಿ. ಅದನ್ನು ಪಾಲಿಸುವುದಷ್ಟೇ ಅಲ್ಲದೆ ವಿಸ್ತರಿಸುವಲ್ಲೂ ಸಹಕಾರ ವೃದ್ಧಿಸಲಿದೆ ಎಂದು ಕ್ಸಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ನಿರ್ಧಾರದಿಂದ ಚೀನಾ-ಭಾರತ ನಡುವಿನ ಬಿಗಡಾಯಿಸಿದ ಸಂಬಂಧವನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಉಭಯ ನಾಯಕರು ನಿಯೋಗ ಮಟ್ಟದ ಮಾತುಕತೆಗೆ ಮುನ್ನ ತಮ್ಮ ಆರಂಭಿಕ ನುಡಿಗಳಲ್ಲಿ ನಡೆಸಿದ್ದರು. ವೂಹಾನ್ ಮೊದಲ ಅನೌಪಚಾರಿಕ ಶೃಂಗಸಭೆ ನಮ್ಮ ಸಂಬಂಧ ವರ್ಧನೆಗೆ ಸೂರ್ತಿಯಾಗಿತ್ತೆಂದು ಉಭಯ ನಾಯಕರು ಅಭಿಪ್ರಾಯಪಟ್ಟರು.
ಚೆನ್ನೈ ಸಂಪರ್ಕದಿಂದ ಉಭಯ ದೇಶಗಳ ನಡುವೆ ಸಹಕಾರದ ನವಯುಗ ಆರಂಭವಾಗಲಿದೆ. ದ್ವಿಪಕ್ಷೀಯ ಸಂಬಂಧಗಳ ಹೊಸ ಆವೇಗ ಮತ್ತು ವಿಶ್ವಾಸ ಮತ್ತಷ್ಟು ಚೈತನ್ಯವನ್ನು ತುಂಬಲಿದೆ ಎಂದು ಪ್ರಧಾನಿ ಮೋದಿ ನುಡಿದರು. ಚೀನಾ-ಭಾರತದ ಸಂಬಂಧಗಳ ಸ್ಥಿರತೆ ವೃದ್ಧಿಸಲಿದೆ ಎಂದರು.
ನಮ್ಮ ನಡುವಿನ ಭಿನ್ನಮತ ಅಂಕೆಯಲ್ಲಿಡಲಾಗುತ್ತದೆಯೇ ವಿನಾ ವಿವಾದವಾಗಿ ಅದು ಬೆಳೆಯದು. ಪರಸ್ಪರರ ಕಳವಳದ ಬಗ್ಗೆ ನಾವು ಸಂವೇದನಾಶೀಲರಾಗಿರಬಲ್ಲೆವು. ನಮ್ಮ ಸಂಬಂಧ ವಿಶ್ವಾದ್ಯಂತ ಶಾಂತಿ ಹಾಗೂ ಸ್ಥಿರತೆಯನ್ನು ಮುನ್ನಡೆಸಲಿದೆ. ಇದೇ ನಮ್ಮ ಸಾಧನೆ. ಭವಿಷ್ಯದಲ್ಲೂ ನಮ್ಮೊಳಗಿನ ಉತ್ತಮ ಸಂಬಂಧ ಮಹಾ ಸಾಧನೆಗೆ ಸೂರ್ತಿಯಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ದ್ವಿಮುಖ ವ್ಯಾಪಾರ ಹಾಗೂ ವ್ಯಾಪಾರ ವರ್ಧನೆ ಕುರಿತು ಕ್ಸಿ-ಮೋದಿ ಚರ್ಚಿಸಿದ್ದು, ಹೂಡಿಕೆಗಾಗಿ ಹೊಸ ಕ್ಷೇತ್ರಗಳತ್ತ ಅವರು ದೃಷ್ಟಿ ಹರಿಸಿದ್ದರು. ವ್ಯಾಪಾರ ಕೊರತೆ ಮತ್ತು ವ್ಯಾಪಾರ ಅಸಮತೋಲನ ಕುರಿತು ಕ್ಸಿ-ಮೋದಿ ಚರ್ಚಿಸಿದ್ದಾಗಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದರು. ಶುಕ್ರವಾರ ಅವರು ಎರಡೂವರೆ ತಾಸು ಮತ್ತು ಶನಿವಾರ ಮೂರು ತಾಸು ಕಾಲ ಇಬ್ಬರು ಮುಕ್ತ ಹಾಗೂ ಹಾರ್ದಿಕವಾಗಿ ಚರ್ಚಿಸಿದರೆಂದು ಗೋಖಲೆ ಹೇಳಿದರು.