ಭ್ರಷ್ಟಾಚಾರ ಆರೋಪವಿಲ್ಲದೇ ಉತ್ತಮ ಆಡಳಿತ ನೀಡಿದ ಸರ್ಕಾರ ನಮ್ಮದು: ಪ್ರಧಾನಿ ಮೋದಿ

ನವದೆಹಲಿ: ಎನ್​ಡಿಎ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ . ದೇಶದ ಜನರಲ್ಲಿ ಬಿಜೆಪಿ ಬಗ್ಗೆ ಒಳ್ಳೆಯ ವಿಶ್ವಾಸವಿದೆ. ಭ್ರಷ್ಟಾಚಾರ ಆರೋಪವಿಲ್ಲದೆ ಉತ್ತಮ ಆಡಳಿತ ನೀಡಿದ ಹೆಮ್ಮೆ ನಮ್ಮದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಯುಪಿಎ ಸರ್ಕಾರ ದೇಶದ ಜನರನ್ನು ಕತ್ತಲಲ್ಲಿ ಇಟ್ಟಿತ್ತು. ಆದರೆ ಇಂದಿನ ಎನ್ ಡಿಎ ಸರ್ಕಾರ ಪ್ರಾಮಾಣಿಕ ಹಾದಿಯಲ್ಲಿ ನಡೆಯುತ್ತಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಮ್ಮ ಧ್ಯೇಯವಾಕ್ಯವಾಗಿದ್ದು, ಪ್ರತಿಯೊಂದು ಪೈಸೆಯನ್ನೂ ಅಭಿವೃದ್ಧಿಗೆ ಬಳಸುತ್ತಿದ್ದೇವೆ ಎಂದರು.

2 ಕೋಣೆ, ಇಬ್ಬರು ಸಂಸದರಿಗೆ ಸೀಮಿತವಾಗಿದ್ದ ಪಕ್ಷವು ಇಂದು ಕಾರ್ಯಕರ್ತರಿಂದಲೇ ದೊಡ್ಡ ಪಕ್ಷವಾಗಿ ಬೆಳೆದಿದೆ. ಬಿಜೆಪಿ ಕಾರ್ಯಕರ್ತರಿಗೆ ಈ ದಿನವನ್ನು ಅರ್ಪಿಸುತ್ತಿದ್ದೇನೆ ಎಂದ ಪ್ರಧಾನಿ, ಪ್ರಸ್ತುತ ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಅಟಲ್ ಬಿಹಾರಿ ವಾಜಪೇಯಿ ದೇಶಕ್ಕಾಗಿ ದುಡಿದವರು ಅವರಿಗೆ ನಮಿಸುತ್ತೇನೆ. ಅಟಲ್​ಜೀ ಅವರ ಮೌಲ್ಯಗಳೊಂದಿಗೆ ಮುನ್ನಡೆಯಬೇಕಿದೆ ಎಂದು ಹೇಳಿದರು.

ಮೀಸಲಾತಿ ಡಾ.ಅಂಬೇಡ್ಕರ್ ಅವರು ಕೊಟ್ಟ ಕೊಡುಗೆ. ಮೀಸಲಾತಿ ಹೆಸರಿನಲ್ಲಿ ವಿರೋಧಿಗಳಿಂದ ಷಡ್ಯಂತ್ರ ನಡೆಯುತ್ತಿದೆ. ವಿರೋಧಿಗಳ ಷಡ್ಯಂತ್ರಕ್ಕೆ ಬಿಜೆಪಿ ಬಲಿಯಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ 10% ಮೀಸಲಾತಿಯನ್ನು ನೀಡಲಾಗಿದ್ದು, ಯಾರಿಂದಲೋ ಕಸಿದು ಯಾರಿಗೋ ಮೀಸಲಾತಿ ನೀಡಿಲ್ಲ. ಹಿಂದಿನಿಂದಲೂ ಮೀಸಲಾತಿ ಪಡೆಯುತ್ತಿದ್ದವರಿಗೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಾಯಕರಿಗೆ ನರೇಂದ್ರ ಮೋದಿಯೇ ಟಾರ್ಗೆಟ್​. ಆರ್ಥಿಕ ಸುಧಾರಣೆಗೆ ಏನೇ ವ್ಯವಸ್ಥೆ ತಂದರೂ ಅದನ್ನು ವಿರೋಧಿಸುತ್ತಾರೆ. ಅಭಿವೃದ್ಧಿ ವಿಚಾರದಲ್ಲಿ ದ್ವೇಷ ಸಾಧಿಸುವುದೇ ಕಾಂಗ್ರೆಸ್​ ಗುರಿ ಎಂದು ಆರೋಪಿಸಿದರು.

ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್​ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಕ್ಲರ್ಕ್​ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಆರು ತಿಂಗಳು ಕಳೆದಿಲ್ಲ. ಆಗಲೇ ಮುಖ್ಯಮಂತ್ರಿಯನ್ನು ಕಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿ ಬೇಕೋ, 2-3 ದಿನ ರಜಾ ತೆಗೆದುಕೊಳ್ಳುವ ವ್ಯಕ್ತಿ ಬೇಕೋ? ದೇಶಕ್ಕೆ ಎಂಥ ಸೇವಕ ಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ತಿಳಿಸಿದರು.

ನೀತಿ ವಿಷಯಗಳಲ್ಲಿ ಕಾಂಗ್ರೆಸ್‌ನದು ದ್ವಿಮುಖ ನೀತಿ ಎಂದು ಆರೋಪಿಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್‌ನ ಜತೆಗಿನ ಅತೃಪ್ತಿಯಿಂದ ಹುಟ್ಟಿಕೊಂಡ ಪಕ್ಷಗಳೆಲ್ಲ ಈಗ ಬಿಜೆಪಿಯನ್ನು ಎದುರಿಸಲು ಅದೇ ಕಾಂಗ್ರೆಸ್‌ ಜತೆ ಕೈಜೋಡಿಸುತ್ತಿವೆ ಎಂದಿದ್ದಾರೆ.

ನಮ್ಮ ಸಂಘಟನಾಶಕ್ತಿಯೇ ನಾವು ಎಷ್ಟು ಬಲಿಷ್ಠರೆಂಬುದನ್ನು ತೋರಿಸುತ್ತದೆ.ಈ ದೇಶವನ್ನು ಅಭಿವೃದ್ಧಿ ಪಥದಲ್ಲಿ ಅತ್ಯುನ್ನತ ಸ್ಥಾನಕ್ಕೇರಿಸುವ ಶಕ್ತಿ ಬಿಜೆಪಿಗೆ ಮಾತ್ರವೇ ಇದೆ. ಸರ್ದಾರ್ ಪಟೇಲ್‌ ಅವರು ಸ್ವಾತಂತ್ರ್ಯಾನಂತರ ಮೊದಲ ಪ್ರಧಾನಿಯಾಗಿದ್ದಿದ್ದರೆ ದೇಶದ ಗತಿಯೇ ಬದಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

BJP National Executive Meet,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ