ಬೆಂಗಳೂರು; ಮೈತ್ರಿ ಪಕ್ಷದ ಅತೃಪ್ತ ಶಾಸಕರು ಸದನಕ್ಕೆ ಬರುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ವಿಪ್ ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಸಹ ಸ್ಪಷ್ವವಾಗಿದೆ ಹೀಗಾಗಿ ಸೋಮವಾರದ ಸರ್ಕಾರ ಬೀಳುವುದು ಖಚಿತ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ರೆಸಾರ್ಟ್ ಬಳಿ ಪತ್ರಕರ್ತರ ಜೊತೆ ಮಾತನಾಡಿದ ಅವರು, “ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಮೈತ್ರಿ ನಾಯಕರು ವಿಪ್ ಅಧಿಕಾರದ ಬಗ್ಗೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಈಗಾಗಲೇ ಅತೃಪ್ತರು ಸದನಕ್ಕೆ ಬರಲು ಒತ್ತಾಯಿಸುವಂತಿಲ್ಲ ಎಂದು ಹೇಳುವ ಮೂಲಕ ವಿಪ್ ಪರಮಾಧಿಕಾರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ಮಾಡಿದೆ. ಹೀಗಾಗಿ ಸೋಮವಾರ ಸುಪ್ರೀಂ ಮೈತ್ರಿ ಸರ್ಕಾರದ ಪರವಾಗಿ ತೀರ್ಪು ನೀಡಲಿದೆ ಎಂಬುದು ಭ್ರಮೆಯಷ್ಟೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅಪಹರಣದ ಬಗ್ಗೆ ಮಾತನಾಡಿದ ಯಡಿಯೂರಪ್ಪ, “ಹೃದ್ರೋಗ ಖಾಯಿಲೆಗೆ ಸಂಬಂಧ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಯಾರೂ ನನ್ನನ್ನು ಕರೆದುಕೊಂಡು ಬಂದಿಲ್ಲ ಎಂದು ಸ್ವತಃ ಶಾಸಕ ಶ್ರೀಮಂತ ಪಾಟೀಲ್ ತಿಳಿಸಿದ್ದಾರೆ. ಆದರೆ ಶಿವಕುಮಾರ್ ರವರು ಸಭೆಯಲ್ಲಿ ಅವರ ಫೋಟೋ ಹಿಡಿದು ಗದ್ದಲವನ್ನೆ ಮಾಡಿದ್ದಾರೆ. ಹೀಗಾಗಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟ ಕಾರಣ ಡಿ.ಕೆ. ಶಿವಕುಮಾರ್ ಸದನದ ಕ್ಷಮೆಯಾಚಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ಕೋಲಾರ ಶಾಸಕ ಶ್ರೀನಿವಾಸ ಗೌಡರು ನಮ್ಮ ಶಾಸಕರ ಮೇಲೆ 5 ಕೋಟಿ ಹಣದ ಆಮಿಷ ಒಡ್ಡಿದ ಆರೋಪ ಮಾಡಿದ್ದಾರೆ. ಹಾಗಾದ್ರೆ ಲಂಚ ಪಡೆಯೋದು ಅಪರಾಧವಲ್ವಾ? ಶ್ರೀನಿವಾಸಗೌಡರು ಐದು ಕೋಟಿಯನ್ನು ಮನೆಯಲ್ಲೇ ಇಟ್ಟುಕೊಂಡಿದ್ದು ತಪ್ಪಲ್ವಾ? ಹೀಗಾಗಿ ಈ ಸುಳ್ಳು ಆರೋಪದ ವಿರುದ್ಧ ನಾವು ಹಕ್ಕುಚ್ಯುತಿ ಮಂಡಿಸಲಿದ್ದೇವೆ. ಅಲ್ಲದೆ ಸಾ.ರಾ. ಮಹೇಶ್ ಹೊರಿಸಿರುವ ಆರೋಪದ ವಿರುದ್ಧ ಶಾಸಕ ಹೆಚ್. ವಿಶ್ವನಾಥ್ ಸಹ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಿದ್ದಾರೆ” ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.