ಸರ್ಕಾರ ರಚನೆಗೂ ಮುನ್ನವೇ ಬಿಎಸ್‍ವೈಗೆ ಹೈಕಮಾಂಡ್ ಬ್ರೇಕ್?

ಬೆಂಗಳೂರು: ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಯಲ್ಲಿ ಕುಮಾರಸ್ವಾಮಿ ಅವರು ಸೋತ ಬಳಿಕ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದ ಬಿಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಬ್ರೇಕ್ ಹಾಕಿದೆ.

ಇಂದು ಬಿಎಸ್ ಯಡಿಯೂರಪ್ಪನವರು ಇಂದೇ ಶಾಸಕಾಂಗ ಪಕ್ಷದ ಸಭೆ ನಡೆಸಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಮನವಿ ಮಾಡುತ್ತಾರೆ ಎನ್ನುವ ವಿಚಾರ ಮೂಲಗಳಿಂದ ಮಾಧ್ಯಮಗಳಿಗೆ ಲಭ್ಯವಾಗಿತ್ತು. ಆದರೆ ನಾವು ಮುಂದಿನ ಸೂಚನೆ ನೀಡುವವರೆಗೆ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ.

ಈ ಕುರಿತು ಬಿಎಸ್‍ವೈ ನಿವಾಸ ಎದುರು ಮಾತನಾಡಿದ ಶಾಸಕ ಜೆಸಿ ಮಾಧುಸ್ವಾಮಿ ಅವರು, ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ನಮ್ಮದೇ ಆದ ಕೆಲ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತಿದೆ ಆದ್ದರಿಂದ ಅವರ ಸೂಚನೆಗೆ ಎದುರು ನೋಡುತ್ತಿದ್ದೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಅವರು ದೆಹಲಿಯಿಂದ ಪಕ್ಷದ ವೀಕ್ಷಕರನ್ನು ಕಳುಹಿಸುತ್ತಾರೆ. ಅವರ ಎದುರೇ ಶಾಸಕಾಂಗ ಸಭೆಯಲ್ಲಿ ಪಕ್ಷದ ನಾಯಕರ ಆಯ್ಕೆಯನ್ನು ಮಾಡಲಾಗುತ್ತದೆ ಎಂದರು.

ಸಂಸದೀಯ ಮಂಡಳಿಯಲ್ಲಿ ಸರ್ಕಾರ ರಚನೆಯ ಕುರಿತು ತೀರ್ಮಾನ ಆಗಬೇಕಿದೆ. ಆ ಬಳಿಕ ಅವರು ಶಾಸಕಾಂಗ ಸಭೆ ನಡೆಸಲು ಸೂಚನೆ ನೀಡುತ್ತಾರೆ. ಇಲ್ಲಿಗೆ ವೀಕ್ಷಕರು ಆಗಮಿಸಿದ ಬಳಿಕ ಶಾಸಕಾಂಗ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಈ ವಿವರಗಳು ಅವರಿಗೆ ತಲುಪಿದ ಬಳಿಕ ನಾವು ಮುಂದಿನ ಸಿದ್ಧತೆಗಳನ್ನು ನಡೆಸುತ್ತೇವೆ. ಆ ಬಳಿಕವೇ ರಾಜ್ಯಪಾಲರ ಭೇಟಿ ನಡೆಯಲಿದೆ. ಬೇರೆ ಪಕ್ಷಗಳಲ್ಲಿ ಇಂತಹ ಯಾವುದೇ ಸಿದ್ಧಾಂತ ಇಲ್ಲ, ರಾಷ್ಟ್ರಿಯ ಪಕ್ಷದ ಹಿನ್ನೆಲೆಯಲ್ಲಿ ನಮ್ಮ ಪಕ್ಷದಲ್ಲಿ ಎಲ್ಲವೂ ಪ್ರಜಾಪ್ರಭುತ್ವದ ಅಡಿಯಲ್ಲೇ ನಡೆಯಲಿದೆ. ಮೊದಲ ಹಂತದ ಮುಕ್ತಾಯವಾದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಅವರ ಸಮಯವನ್ನು ಕೇಳಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಮಯ ನಿಗದಿ ಮಾಡಲಾಗುವುದು. ಇದಕ್ಕೆ 1 ಅಥವಾ 2 ದಿನಗಳು ಬೇಕಾಗುತ್ತದೆ ಎಂದರು.

ಮೈತ್ರಿ ನಾಯಕರ ಆರೋಪಗಳಿಗೆ ನಾವು ಕಿವಿ ಕೊಡುವುದಿಲ್ಲ, ಈಗಾಗಲೇ ನಮ್ಮ ಮೇಲೆ ಸದನದಲ್ಲೇ ಹಲವು ಆರೋಪ ಮಾಡಿದ್ದಾರೆ. ನಮ್ಮ ಮುಂದೇ ರಾಜ್ಯದ ಜನರಿಗೆ ಒಂದು ಸ್ಥಿರ ಸರ್ಕಾರ ರಚನೆ ಮಾಡುವ ಹಾಗೂ ಅಭಿವೃದ್ಧಿಗೆ ಪೂರಕ ಸರ್ಕಾರ ನಡೆಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ