ರಾಯ್ಪುರ್, ಜು.9-ಛತ್ತೀಸ್ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಸುಕ್ಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲೀಯ ಮಹಿಳೆಯೊಬ್ಬಳು ಹತಳಾಗಿದ್ದಾಳೆ.
ಕಳೆದ ವಾರ ಛತ್ತೀಸ್ಗಢದ ಧಮ್ತರಿ ಅರಣ್ಯ ಪ್ರದೇಶದಲ್ಲಿ ಯೋಧರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಮಹಿಳೆಯರೂ ಸೇರಿದಂತೆ ನಾಲ್ವರು ನಕ್ಸಲರು ಹತರಾಗಿದ್ದರು.
ಡಬ್ಬಕೊಂಟಾ ಗ್ರಾಮದ ಬಳಿ ಅರಣ್ಯದಲ್ಲಿ ಇಂದು ಮುಂಜಾನೆ 6 ಗಂಟೆಯಲ್ಲಿ ಜಂಟಿ ಭದ್ರತಾ ಪಡೆಗಳು ನಕ್ಸಲರಿಗಾಗಿ ಶೋಧ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಮಾವೋವಾದಿಗಳು ಪೊಲೀಸರು ಮತ್ತು ಯೋಧರತ್ತ ಗುಂಡು ಹಾರಿಸಿದಾಗ ಎನ್ಕೌಂಟರ್ ನಡೆಯಿತು. ಈ ಗುಂಡಿನ ಚಕಮಕಿಯಲ್ಲಿ ಮಹಿಳಾ ನಕ್ಸಲ್ ಹತಳಾದಳು ಎಂದು ರಾಜ್ಯ ಉಪ ಪೊಲೀಸ್ ಮಹಾ ನಿರೀಕ್ಷಕ(ನಕ್ಸಲ್ ನಿಗ್ರಹ ಕಾರ್ಯಾಚರಣೆ) ಪಿ. ಸುಂದರ್ರಾಜ್ ತಿಳಿಸಿದ್ದಾರೆ.
ಹತ ಮಹಿಳಾ ಮಾವೋವಾದಿ ಬಳಿ ಇದ್ದ ರೈಫಲ್ ವಶಪಡಿಸಿಕೊಳ್ಳಲಾಗಿದೆ.
ಗುಂಡಿನ ಚಕಮಕಿ ವೇಳೆ ಪರಾರಿಯಾಗಿರಬಹುದಾದ ಇತರ ನಕ್ಸಲರಿಗಾಗಿ ತೀವ್ರ ಶೋಧ ಮುಂದುವರೆದಿದೆ.