ಭಿನ್ನಮತೀಯ ಶಾಸಕರ ವಿರುದ್ಧ ಸ್ಪೀಕರ್‍ಗೆ ದೂರು-ಪ್ರತ್ಯೇಕವಾಗಿ ದೂರು ನೀಡಿದ ಮೈತ್ರಿ ನಾಯಕರು

ಬೆಂಗಳೂರು, ಜು.9-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿರುವ ಭಿನ್ನಮತೀಯ ಶಾಸಕರ ವಿರುದ್ಧ ದೋಸ್ತಿ ಪಕ್ಷಗಳ ನಾಯಕರು ಸ್ಪೀಕರ್ ಅವರಿಗೆ ಪ್ರತ್ಯೇಕವಾಗಿ ದೂರು ನೀಡಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಸ್ಪೀಕರ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರತಾಪ್‍ಗೌಡ ಪಾಟೀಲ್, ಬಿ.ಸಿ.ಪಾಟೀಲ್, ರಾಮೇಶ್ ಜಾರಿಕೊಹಿಳಿ, ಶಿವರಾಮ್ ಹೆಬ್ಬಾರ್, ಮಹೇಶ್ ಕಮಟಳ್ಳಿ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ , ಆನಂದ್‍ಸಿಂಗ್ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಅವರಿಗೆ ದೂರು ನೀಡಿದ್ದಾರೆ.

ರಾಮಲಿಂಗಾರೆಡ್ಡಿ ಯಾವುದೇ ಪ್ಲೈಟ್ ಹತ್ತಿಲ್ಲ. ಮುಂಬೈಗೂ ಹೋಗಿಲ್ಲ. ಇಲ್ಲೆ ಇದ್ದರೆ. ಹಾಗಾಗಿ ಅವರ ವಿರುದ್ಧ ದೂರು ನೀಡಿಲ್ಲ. ರೋಷನ್ ಬೇಗ್ ಇಂದು ಮಧ್ಯಾಹ್ನವಷ್ಟೇ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಅವರ ವಿರುದ್ಧವೂ ಕಾಂಗ್ರೆಸ್ ನಾಯಕರು ದೂರು ನೀಡಿಲ್ಲ.

ಜೆಡಿಎಸ್ ವತಿಯಿಂದಲೂ ಆ ಪಕ್ಷದ ಶಾಸಕರಾದ ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ಸ್ಪೀಕರ್ ಅವರನ್ನು ಭೇಟಿ ಮಾಡಿ ದೂರು ನೀಡಿವೆ.

ಒಂದು ವೇಳೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್ ಅವರು ರಾಜೀನಾಮೆ ನೀಡಿರುವವರ ವಿರುದ್ಧ ಕ್ರಮ ಕೈಗೊಂಡಿದ್ದೇ ಆದರೆ ಒಟ್ಟು 12 ಮಂದಿ ಜೆಡಿಎಸ್-ಕಾಂಗ್ರೆಸ್‍ನ ಶಾಸಕರು ಅನರ್ಹಗೊಳ್ಳಲಿದ್ದು, ಆರು ವರ್ಷ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲದಂತಾಗುತ್ತದೆ. ಜತೆಗೆ ಬಿಜೆಪಿ ಸರ್ಕಾರ ರಚನೆ ಮಾಡಿದರೂ ಅದರಲ್ಲಿ ಸಚಿವರಾಗುವ ಅಥವಾ ನಿಗಮ ಮಂಡಳಿ ಅಧ್ಯಕ್ಷರಾಗುವ ಅವಕಾಶವನ್ನೂ ಕಳೆದುಕೊಳ್ಳುತ್ತಾರೆ.

ಆದರೆ, ಈ ಕಾಯ್ದೆಯಡಿ ಕ್ರಮಕೈಗೊಂಡರೆ ಬದಲಿಯಾಗಿ ಅತೃಪ್ತ ಶಾಸಕರು ನ್ಯಾಯಾಂಗ ಹೋರಾಟ ಮಾಡಿ ತಮ್ಮ ರಾಜಕೀಯ ಉದ್ದೇಶಗಳನ್ನು ಸಫಲಗೊಳಿಸಿಕೊಳ್ಳುವ ಉದ್ದೇಶಗಳಿವೆ.

ಅಂತಿಮ ಹಂತದಲ್ಲಿ ಉಸಿರುಗಟ್ಟುತ್ತಿರುವ ಸಮ್ಮಿಶ್ರ ಸರ್ಕಾರಕ್ಕೆ ಶಾಸಕಾಂಗ ಪಕ್ಷದ ನಾಯಕರು ನೀಡಿರುತ್ತಿರುವ ದೂರು ಪುನರ್‍ಜೀವನ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ