ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಮೊದಲ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮ ಜೂ.30ರಿಂದ ಮತ್ತೆ ಆರಂಭವಾಗಲಿದೆ.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಮೋದಿಯವರು ಅಕ್ಟೋಬರ್ನಲ್ಲಿ ಮನ್ ಕೀ ಬಾತ್ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದ್ದರು.
ತಿಂಗಳಿಗೊಮ್ಮೆ ಆಕಾಶವಾಣಿ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ಆಡಳಿತದ ಕೊನೆಯ ಮತ್ತು 53ನೇ ಮನ್ ಕೀ ಬಾತ್ ನಡೆಸಿ ಮುಕ್ತಾಯಗೊಳಿಸಿದ್ದರು.
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಎರಡನೇ ಅವಧಿಗೆ ಪ್ರಧಾನಿ ಪಟ್ಟಕ್ಕೆರಿರುವ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಮತ್ತೆ ಆರಂಭವಾಗುತ್ತಿದ್ದು, ಜೂನ್ 30ರಂದು ಎರಡನೇ ಆವೃತ್ತಿಯ ಮೊದಲ ಕಾರ್ಯಕ್ರಮ ನಡೆಯಲಿದೆ.
ನರೇಂದ್ರ ಮೋದಿಯವರು ದೇಶದ ಜನರಿಗೆ ಸಂಬಂಧಪಟ್ಟ ಸಮಸ್ಯೆಗಳು, ವಿಚಾರಗಳ ಬಗ್ಗೆ ಮನ್ ಕೀ ಬಾತ್ದಲ್ಲಿ ಮಾತನಾಡಲಿದ್ದಾರೆ. ಹಾಗೇ ಅವರು ಯಾವ ವಿಷಯದ ಬಗ್ಗೆ ಮಾತನಾಡಬಹುದು ಎಂದು ಜನರೂ ಕೂಡ ತಿಳಿಸಬಹುದು. ಅದಕ್ಕೆ ಸಂಬಂಧಪಟ್ಟಂತೆ ಜೂ.11ರಿಂದ 26ರ ವರೆಗೆ ದೂರವಾಣಿ ಸಂಖ್ಯೆ 1800-11-7800ಗೆ ಕರೆ ಮಾಡಬಹುದು. ಅಥವಾ ಮೈ ಗವ್ (MyGov) ವೇದಿಕೆಯಲ್ಲೂ ತಿಳಿಸಬಹುದು ಎಂದು ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಗಾಗಿ ನಾಗರಿಕರು ಹಾಗೂ ಕೇಂದ್ರ ಸರಕಾರದ ನಡುವೆ ಸಂಪರ್ಕ ಮಾಡಬಹುದಾದ ಸಾಮಾಜಿಕ ಜಾಲತಾಣದ ವೇದಿಕೆಯಾಗಿರುವ ”ಮೈ ಗವ್’ ವೇದಿಕೆ ಟ್ವೀಟ್ ಮಾಡಿ ತಿಳಿಸಿದೆ.
PM Modi,Man Ki Baath,radio-programme