ವಾಯು ಚಂಡಮಾರುತ ಹಿನ್ನಲೆ: ಬಿರುಗಾಳಿ ಸಹಿತ ಭಾರೀ ಮಳೆ

ನವದೆಹಲಿ:ಗುಜರಾತ್ ನಲ್ಲಿ ‘ವಾಯು’ ಚಂಡಮಾರುತ ಅಪ್ಪಳಿಸಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಅದು ಚಂಡಮಾರುತವಾಗಿ ಬದಲಾಗಿ ಗುಜರಾತ್ ತೀರವನ್ನು ತಲುಪಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಜೂ.12ರಿಂದ ಎರಡು ದಿನಗಳ ಕಾಲ ಸತತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಗುಜರಾತ್​ನ ಪೋರ್​ಬಂದರ್​, ಮಹುವಾ, ವೆರಾವಲ್​ ಮತ್ತು ದಿಯು ಪ್ರದೇಶಗಳಿಗೆ ಸುಮಾರು 110ರಿಂದ 120 ಕಿಮೀ ವೇಗದಲ್ಲಿ ಪ್ರವೇಶಿಸುವ ‘ವಾಯು’ ಚಂಡಮಾರುತ ನಂತರ 135 ಕಿ.ಮೀವರೆಗೂ ವೇಗ ಹೆಚ್ಚಿಸಿಕೊಂಡು ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಾಯು ಚಂಡಮಾರುತದ ಪರಿಣಾಮ ದೇಶದ ಪಶ್ಚಿಮ ಕರಾವಳಿಯುದ್ದಕ್ಕೂ ಗಂಟೆಗೆ 120 ಕಿಮೀ ವೇಗದ ಬಿರುಗಾಳಿ ಬೀಸಲಿದ್ದು, ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ.

ಕೇರಳ, ಕರ್ನಾಟಕದ ಕರಾವಳಿ ಜಿಲ್ಲೆಗಳು, ಗುಜರಾತ್‌ನ ಪೋರ್‌ಬಂದರ್, ವೆರಾವಲ್ ಮತ್ತು ಮಹುವಾ ಹಾಗೂ ಕೇಂದ್ರಾಡಳಿತ ಪ್ರದೇಶ ದಿಯುಗೆ ವಿಶೇಷ ಮುನ್ಸೂಚನೆ ನೀಡಲಾಗಿದೆ. ಜೂನ್ 13ರಂದು 135 ಕಿ.ಮೀ ವೇಗದೊಂದಿಗೆ ಗಾಳಿ ಹಾಗೂ ಮಳೆ ಬೀಳಲಿದೆ ಎಂದು ಸೂಚನೆ ನೀಡಲಾಗಿದೆ.

ಸೌರಾಷ್ಟ್ರ, ಭಾವ್ ನಗರ್, ಗಿರ್ ಸೋಮನಾಥ್, ದಿಯು, ನವಸರಿ, ವಲ್ಸಾದ್, ದಾಮನ್, ದಾದ್ರಾನಗರ್ ಹವೇಲಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ. ಈ ತಿಂಗಳ 15ರವರೆಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ರವಾನಿಸಲಾಗಿದೆ.

ಮಳೆ ಬಂದಾಗ ಭೂಕುಸಿತ ಉಂಟಾಗುವ ಕೇರಳ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನೆರೆ ಉಂಟಾಗುವ ಕಡೆಯೂ ಎಚ್ಚರಿಕೆ ವಹಿಸುವಂತೆ ಕೇರಳ ಸರಕಾರ ಪೊಲೀಸರಿಗೆ ಆದೇಶಿಸಿದೆ.

ವಾಯು ಚಂಡಮಾರುತದ ಕಾರಣ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಹಾಗೂ ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.

Vayu Cyclone,hit western coast,Gujarat,karnataka coastal

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ