ಭಾರತ ಅಭಿವೃದ್ಧಿಶೀಲ ರಾಷ್ಟ್ರ ಮಾನ್ಯತೆ ರದ್ದುಗೊಳಿಸಿದ ಅಮೆರಿಕ

ವಾಷಿಂಗ್ಟನ್​: ಅಂದಾಜು 44 ವರ್ಷಗಳ ಬಳಿಕ ಭಾರತಕ್ಕೆ ನೀಡಿದ್ದ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಮಾನ್ಯತೆಯನ್ನು ಅಮೆರಿಕ ರದ್ದುಗೊಳಿಸಿದೆ. ಈ ಸಂಬಂಧದ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಹಿ ಹಾಕಿರುವುದಾಗಿ ವೈಟ್​ಹೌಸ್​ನ ಘೋಷಣೆ ತಿಳಿಸಿದೆ. ಜೂನ್​ 5ರಿಂದ ಈ ಆದೇಶ ಜಾರಿಗೆ ಬರುವುದಾಗಿ ಹೇಳಿದೆ.

ಜತೆಗೆ ವಿಶ್ವ ವಾಣಿಜ್ಯ ಸಂಘಟನೆಯ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಮಾನ್ಯತೆಯನ್ನೂ ಅಂತ್ಯಗೊಳಿಸಲು ಅಮೆರಿಕ ನಿರ್ಧರಿಸಿದೆ. ಇದರಿಂದಾಗಿ ಸಿಎಸ್​ಪಿವಿ ಉತ್ಪನ್ನಗಳ ಸುಗಮ ವಹಿವಾಟಿನ ಮೇಲೆ ನೇರ ಪರಿಣಾಮ ಉಂಟಾಗಲಿದೆ ಎನ್ನಲಾಗುತ್ತಿದೆ.

1975ರ ನವೆಂಬರ್​ 24ರಂದು ಹೊರಡಿಸಿದ್ದ ಕಾರ್ಯಕಾರಿ ಆದೇಶ ಸಂಖ್ಯೆ 11888 ಪ್ರಕಾರ ಅಮೆರಿಕ ಅಧ್ಯಕ್ಷರು ಸಾಮಾನ್ಯ ಪದ್ಧತಿಯ ಆದ್ಯತೆಗಳಿಗಾಗಿ (ಜಿಎಸ್​ಪಿ) ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಘೋಷಿಸಿದ್ದರು. ಆದರೆ, ಈಗ ಅಮೆರಿಕದ ಉತ್ಪನ್ನಗಳಿಗೆ ಸಮಾನವಾದ ಮತ್ತು ಸುಲಭವಾದ ಮಾರುಕಟ್ಟೆ ಒದಗಿಸುವ ವಿಷಯದಲ್ಲಿ ಭಾರತದಿಂದ ಯಾವುದೇ ಭರವಸೆ ಬಂದಿಲ್ಲ. ಆದ್ದರಿಂದ, ಭಾರತಕ್ಕೆ ನೀಡಲಾಗಿರುವ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಮಾನ್ಯತೆಯನ್ನು 2019ರ ಜೂನ್​ 5ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷರ ಘೋಷಣಾ ಪತ್ರದಲ್ಲಿ ತಿಳಿಸಲಾಗಿದೆ.

ಚೀನಾದೊಂದಿಗೆ ವಾಣಿಜ್ಯ ಸಮರ ಮುಂದುವರಿಸಿರುವಂತೆ ಅಮೆರಿಕ ಈಗ ಭಾರತದ ಜತೆಗೂ ವಾಣಿಜ್ಯ ಸಮರ ಮುಂದುವರಿಸಿದೆ. ಅಕ್ರಮ ವಲಸಿಗರ ಸಮಸ್ಯೆ ಹಿನ್ನೆಲೆಯಲ್ಲಿ ಮೆಕ್ಸಿಕೋದಿಂದ ಮಾಡಿಕೊಳ್ಳಲಾಗುವ ಆಮದಿನ ಮೇಲಿನ ಸುಂಕವನ್ನು ಟ್ರಂಪ್​ ಹೆಚ್ಚಿಸಿದ್ದರು. ಅಲ್ಲದೆ, ಪಾಕಿಸ್ತಾನಿ ರಾಜತಾಂತ್ರಿಕ ವರ್ಗದವರಿಗೆ ನೀಡಲಾಗುತ್ತಿದ್ದ ತೆರಿಗೆ ವಿನಾಯಿತಿಯನ್ನು ಕೂಡ ಹಿಂಪಡೆದು ಆದೇಶಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ