ಕರಾಚಿ, ಮೇ 8- ತನ್ನ ಜಲಗಡಿ ಪ್ರದೇಶಕ್ಕೆ ಅಕ್ರಮವಾಗಿ ನುಸುಳಿದ್ದಾರೆಂಬ ಆರೋಪದ ಮೇಲೆ ಭಾರತದ 34 ಮೀನುಗಾರರನ್ನು ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆ ನಿನ್ನೆ ಬಂಧಿಸಿದೆ.
ಜಲಸರಹದ್ದು ಉಲ್ಲಂಘನೆ ಆರೋಪದ ಮೇಲೆ ಭಾರತದ 34 ಬೆಸ್ತರನ್ನು ಆರು ದೋಣಿಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಸ್ಥಳೀಯ ಬಂದರುಕಟ್ಟೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಬಂಧಿತ ಬೆಸ್ತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಎಲ್ಲಾ 34 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಜನವರಿಯಲ್ಲಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆ ಗುಜರಾತ್ನ ಐವರು ಬೆಸ್ತರನ್ನು ಬಂಧಿಸಿತ್ತು.
ಪಾಕಿಸ್ತಾನ ಇತ್ತೀಚೆಗೆ ಕರಾಚಿಯ ಲಂಧಿ ಮತ್ತು ಮಲೀರ್ ಜೈಲುಗಳಲ್ಲಿದ್ದ 250 ಭಾರತೀಯ ಬೆಸ್ತರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.
ಈಗ ಭಾರತದ 34 ಮೀನುಗಾರರು ಬಂಧನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಾಂಗ ವ್ಯವಹಾರ ಸಚಿವಾಲಯ ಅವರ ಬಿಡುಗಡೆಗಾಗಿ ಉನ್ನತ ಮಟ್ಟದಲ್ಲಿ ಪಾಕಿಸ್ತಾನದೊಂದಿಗೆ ಸಮಾಲೋಚನೆ ನಡೆಸುತ್ತಿದೆ.