ಹಾಸನ: ಪ್ರಧಾನಿ ನರೇಂದ್ರ ಮೋದಿ ಇಡೀ ರಾಷ್ಟ್ರವನ್ನ ಹಿಂದೂ ರಾಷ್ಟ್ರ ಮಾಡಬೇಕು ಎನ್ನೋ ಕಲ್ಪನೆಯಲ್ಲಿದ್ದಾರೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಯನ್ನು ರದ್ದುಗೊಳಿಸಬೇಕೆಂಬ ನಿರ್ಧಾರದಲ್ಲಿದ್ದಾರೆ. ದೇಶದ 130ಕೋಟಿ ಜನ ಒಪ್ಪಿದರೆ ಮಾದಲಿ ಬಿಡಿ ಈ ಚುನಾವಣೆಯಲ್ಲಿ ಹಿಂದು ರಾಷ್ಟ್ರ ಜಾರಿಯ ಪರೀಕ್ಷೆಯೂ ನಡೆಯಲಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಗುಡುಗಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಯಲಿಯೂರಿನಲ್ಲಿ ಚುನಾವಣೆ ಪ್ರಚಾರ ವೇಳೆ ಮಾತನಾಡಿದ ದೇವೇಗೌಡರು, ಸಂವಿಧಾನದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿದ್ದು ನಾವಲ್ಲ; ಅದು ಮೊದಲಿನಿಂದಲೂ ಇದೆ. ಈಗ ಬದಲಾವಣೆ ಬೇಕು ಎಂದು ಏಕೆ ಎನಿಸುತ್ತಿದೆ? ಇದನ್ನು ನಾನು ಒಪ್ಪುವುದಿಲ್ಲ ಎಂದರು.
ಮೋದಿ ಅವರಿಗೆ ಇಡೀ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬ ಪರಿಕಲ್ಪನೆ ಇದೆ. ಹಿಂದೆ ರಾಜರುಗಳು, ಎಲ್ಲಾ ವರ್ಗದ ಜನರು, ಹೀಗೆ ಎಲ್ಲರ ಅಭಿಪ್ರಾಯ ಪಡೆದೇ ಈ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಅಲ್ಲಿ ಮುಸ್ಲಿಂ, ಪಂಡಿತರು ಕ್ರಿಶ್ಚಿಯನ್, ಬೌದ್ಧ ಹೀಗೆ ಎಲ್ಲಾ ವರ್ಗದವರೂ ವಾಸವಿದ್ದಾರೆ.
ಮಹಾತ್ಮಗಾಂಧಿ ನೌಕಾಲಿಯಲ್ಲಿ ಮುಸ್ಲಿಂರ ಹತ್ಯೆಯಾದಾಗ ಹೋರಾಟ ಮಾಡಲಿಲ್ಲವೇ? ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಅವರು. ಇವರೇನು ಸ್ವಾತಂತ್ರ್ಯ ತಂದು ಕೊಟ್ಟರಾ? ಅಂಬೇಡ್ಕರ್ ಬರೆದುಕೊಟ್ಟ ಸಂವಿಧಾನ ಇದೆ. ದೇಶದ 130 ಕೋಟಿ ಜನ ಇದನ್ನು ಒಪ್ಪುತ್ತಾರೆ ಎನ್ನುವುದಾದರೆ ಪರೀಕ್ಷೆ ನಡೆಯಲಿ.
ದೇಶದ 130 ಕೋಟಿ ಜನರು 370 ವಿಧಿ ರದ್ದುಪಡಿಸಲು ಒಪ್ಪಿದರೆ ರದ್ದು ಮಾಡಲಿ. ನಮ್ಮ ಅಭ್ಯಂತರವಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವು ಎಲ್ಲಾ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಪರಸ್ಪರ ಅನ್ಯೋನ್ಯವಾಗಿ ಸಹಬಾಳ್ವೆಯಿಂದ ಬಾಳುವ ಒಂದು ವ್ಯವಸ್ಥೆಯನ್ನು ನಾವು ಬಯಸುತ್ತೇವೆ ಎಂದು ಹೇಳುವ ಮೂಲಕ ಘಟಬಂಧದ ನಿಲುವನ್ನು ಸ್ಪಷ್ತಪಡಿಸಬೇಕೆಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
H D Devegowda,PM Modi,Hindu nation