ಹಾರ್ದಿಕ್ ಚುನಾವಣೆಯ ಕನಸು ಸುಪ್ರೀಂ ಕೋರ್ಟ್​ನಲ್ಲೂ ಭಗ್ನ

ನವದೆಹಲಿ: ನಾಲ್ಕು ವರ್ಷಗಳ ಹಿಂದಿನ ಗಲಾಟೆ ಪ್ರಕರಣವೊಂದು ಹಾರ್ದಿಕ್ ಪಟೇಲ್ ಅವರಿಗೆ ಇವತ್ತೂ ಮುಳುವಾಗಿದೆ. ಚುನಾವಣೆಗೆ ಸ್ಪರ್ಧಿಸಲು ಸಕಲ ತಯಾರಿಯಲ್ಲಿರುವ ಹಾರ್ದಿಕ್ ಅವರಿಗೆ ಈ ಪ್ರಕರಣ ಪ್ರಮುಖ ತಡೆಯಾಗಿದೆ. ಹಾರ್ದಿಕ್ ಪಟೇಲ್ ದೋಷಿಯಾಗಿರುವ 2015ರ ವಿಸ್​ಪುರ್ ಹಿಂಸಾಚಾರ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ವಿಸನಗರ್ ಸೆಷೆನ್ಸ್ ನ್ಯಾಯಾಲಯವೊಂದು ಈ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿಗೆ ತಡೆ ನೀಡುವಂತೆ ಹಾರ್ದಿಕ್ ಪಟೇಲ್ ಮಾಡಿಕೊಂಡಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಕೆಲ ದಿನಗಳ ಹಿಂದಷ್ಟೇ ತಿರಸ್ಕರಿಸಿತ್ತು. ಅದಾದ ಬಳಿಕ ಪಟೇಲ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿ, ತುರ್ತಾಗಿ ಮತ್ತೊಮ್ಮೆ ಪ್ರಕರಣದ ವಿಚಾರಣೆಯನ್ನು ನಡೆಸಬೇಕೆಂದು ಕೋರಿಕೊಂಡಿದ್ದರು. ಈ ಅಪರಾಧ ಪ್ರಕರಣದಲ್ಲಿ ದೋಷಿ ತೀರ್ಪಗೆ ತಡೆ ಬಿದ್ದರೆ, ಅಥವಾ ಖುಲಾಸೆಗೊಂಡರೆ ಮಾತ್ರ ಹಾರ್ದಿಕ್ ಪಟೇಲ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ.

ಪಟೇಲ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ತೀರ್ಪು ಬಂದು ಇಷ್ಟು ದಿನವಾದರೂ ಸುಮ್ಮನಿದ್ದಿರಿ. ನಿಮಗೇ ಆಸಕ್ತಿ ಇಲ್ಲದಿದ್ದ ಮೇಲೆ ನಾವು ಏನು ಮಾಡಲು ಸಾಧ್ಯ” ಎಂದು ಸರ್ವೋಚ್ಚ ನ್ಯಾಯಾಲಯವು ಹಾರ್ದಿಕ್​ಗೆ ಬುದ್ಧಿ ಹೇಳಿತು.

ಈ ಸಂದಿಗ್ಧ ಪರಿಸ್ಥಿತಿ ಬಗ್ಗೆ ಹಾರ್ದಿಕ್ ಪಟೇಲ್ ವ್ಯಾಕುಲಗೊಂಡಿದ್ದಾರೆ. ಹಲವು ಬಿಜೆಪಿ ಮುಖಂಡರು ವಿವಿಧ ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿದ್ದಾರೆ.

ಅವರಿಗಿಲ್ಲದ ಕಾನೂನು ತನಗೆ ಮಾತ್ರ ಯಾಕೆ ಎಂಬರ್ಥದಲ್ಲಿ ಹಾರ್ದಿಕ್ ಪಟೇಲ್ ಅವರು ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಪಾಟೀದಾರ್ ಸಮುದಾಯದ ಮೀಸಲಾತಿ ಹೋರಾಟದ ಮೂಲಕ ಜನಮನ್ನಣೆ ಗಳಿಸಿದ್ದ ಹಾರ್ದಿಕ್ ಪಟೇಲ್ ಅವರು ಮಾರ್ಚ್ 12ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಜಾಮನಗರ್ ಕ್ಷೇತ್ರದಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೂಡ ಸಿಕ್ಕಿತು. ಆದರೆ, 2015ರ ವಿಸ್​ಪುರ್ ಗಲಭೆ ಪ್ರಕರಣದಲ್ಲಿ ಜೈಲುಶಿಕ್ಷೆ ನೀಡಿ ವಿಧಿಸಲಾಗಿದ್ದ ತೀರ್ಪಿಗೆ ತಡೆ ಸಿಕ್ಕುವವರೆಗೂ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈಗ ಸುಪ್ರೀಂ ಕೋರ್ಟ್ ಕೂಡ ತುರ್ತು ವಿಚಾರಣೆಗೆ ನಿರಾಕರಿಸಿರುವುದು ಹಾರ್ದಿಕ್ ಪಟೇಲ್ ಅವರ ಚುನಾವಣೆಯ ಕನಸ್ಸನ್ನು ಬಹುತೇಕ ಭಗ್ನಗೊಳಿಸಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ