‘ಸಂಸದರೇ ಜನ ನಮ್ಮನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ’; ಪ್ರಧಾನಿ ಮೋದಿ ಕಿವಿಮಾತು

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಂದು ಆಷಾಢ ಶುಕ್ರವಾರ ಅವಿಶ್ವಾಸ ಮತ ಎದುರಿಸುವ ಅಗ್ನಿಪರೀಕ್ಷೆ ಎದುರಾಗಿದೆ. ಇದರಲ್ಲಿ ಗೆದ್ದುಬರುವ ವಿಶ್ವಾಸದಲ್ಲಿ ಬಿಜೆಪಿ ಇದ್ದರೂ ಕೂಡ ಲೋಕಸಭೆಯಲ್ಲಿ ಏನಾಗುತ್ತದೆ ಎಂಬ ಇಡೀ ದೇಶದ ಜನತೆಯ ಗಮನ ಶಕ್ತಿಕೇಂದ್ರ ದೆಹಲಿಯ ಸಂಸತ್ತು ಮೇಲಿದೆ. ಲೋಕಸಭೆಯಲ್ಲಿ ಇಂದು ತೀವ್ರ ಗದ್ದಲ, ಕೋಲಾಹಲ ಏರ್ಪಡುವ ಸಾಧ್ಯತೆಯಿರುವುದರಿಂದ ಸಂಸದರು ಸಂಯಮ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಹೋದ್ಯೋಗಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಅವರು, ”ಇಂದು ನಮ್ಮ ಸಂಸತ್ತಿನ ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯವಾದ ದಿನ. ಈ ಸಂದರ್ಭದಲ್ಲಿ ನನ್ನ ಸಂಸದ ಸಹೋದ್ಯೋಗಿಗಳು ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಇಲ್ಲಿ ರಚನಾತ್ಮಕ, ಸಮಗ್ರ ಮತ್ತು ಮುಕ್ತ ಚರ್ಚೆ ನಡೆಯುತ್ತದೆ ಎಂದು ಭಾವಿಸುತ್ತೇನೆ. ಸಂಸತ್ತಿನಲ್ಲಿ ಗೌರವಯುತವಾಗಿ ನಡೆದುಕೊಂಡು ರಚನಾತ್ಮಕ ಚರ್ಚೆ ನಡೆಸಿ ಉತ್ತಮ ಆಡಳಿತವನ್ನು ಜನತೆಗೆ ನೀಡೋಣ, ಆ ಮೂಲಕ ಸಂವಿಧಾನವನ್ನು ರಚಿಸಿದವರಿಗೆ ಗೌರವ ಸಲ್ಲಿಸೋಣ, ದೇಶದ ಜನತೆ ನಮ್ಮನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.ಇಂದಿನ ಕಲಾಪದಲ್ಲಿ ಲೋಕಸಭೆಯಲ್ಲಿ ಆಡಳಿತಾರೂಢ ಎನ್ ಡಿಎ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಗದ್ದಲ, ಕೋಲಾಹಲವೇರ್ಪಡುವ ಸಾಧ್ಯತೆಯಿದೆ. ಎನ್ ಡಿಎಯ ಮಾಜಿ ಮೈತ್ರಿಪಕ್ಷ ಟಿಡಿಪಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ