ಸ್ವತಂತ್ರ ಸ್ಪರ್ಧೆಯಿಲ್ಲ; ಪಕ್ಷದ ನಿರ್ಧಾರಕ್ಕೆ ಬದ್ಧ; ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದೇ ನಮ್ಮ ಉದ್ದೇಶ: ತೇಜಸ್ವಿನಿ ಅನಂತಕುಮಾರ್

ಬೆಂಗಳೂರು: ಸ್ವತಂತ್ರ ಸ್ಪರ್ಧೆ ಮಾಡುವ ಯೋಚನೆಯಿಲ್ಲ, ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಧಾರಕ್ಕೆ ತಾವು ಬದ್ಧರಾಗಿದ್ದು, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ನಮ್ಮ ಉದ್ದೇಶ. ಈ ದಿಸೆಯಲ್ಲಿ ನಾವೆಲ್ಲರು ಪಕ್ಷದ ಒಗ್ಗಟ್ಟಿಗಾಗಿ ಕೆಲಸಮಾಡೋಣವೆಂದು ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ.

ತೇಜಸ್ವಿನಿ ಅನಂತ್​ ಕುಮಾರ್​ಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆ ಟಿಕೆಟ್ ನೀಡದೇ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದ ಹಿನ್ನಲೆಯಲ್ಲಿ ತೆಜಸ್ವಿನಿ ಬೆಂಬಲಿಗರು ಅವರ ಮನೆ ಮುಂದೆ ಜಮಾಯಿಸಿ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಂತಕುಮಾರ್ ಅವರಿಗೆ ಬಿಜೆಪಿ ಅನ್ಯಾಯಮಾಡಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ತೇಜಸ್ವಿನಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಗ್ರಹಿಸಿದ್ದಾರೆ.

ಈ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿನಿ ಅನಂತಕುಮಾರ್, ಸ್ವತಂತ್ರವಾಗಿ ನಿಲ್ಲುವುದಿಲ್ಲ. ನಾವು ಪಕ್ಷದ ಜತೆಗಿದ್ದೇವೆ. ಪ್ರಚಾರದ ಜವಾಬ್ದಾರಿ ನಮ್ಮ ಮೇಲಿದೆ. ಮೋದಿಯವರು ಮತ್ತೊಮ್ಮೆ ನಮ್ಮ ಪ್ರಧಾನಿಯಾಗಬೇಕು. ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತೇವೆ. ಹೀಗಾಗಿ ಬೆಂಬಲಿಗರು ಸಮಾಧಾನಿತರಾಗಬೇಕು ಎಂದರು.

ದೇಶ ಮೊದಲು ಪಕ್ಷ, ವ್ಯಕ್ತಿ ಆನಂತರ ಎಂಬುದು ನಮ್ಮ ಸಿದ್ಧಾಂತ. ಹಾಗಾಗಿ ಈಗ ನಮ್ಮ ಪ್ರಬುದ್ಧತೆಯನ್ನು ತೋರಿಸುವ ಸಂದರ್ಭ ಇದಾಗಿದ್ದು, ಪಕ್ಷದ ಮುಖಂಡರ ತೀರ್ಮಾನಕ್ಕೆ ನಾನು ಬದ್ಧಳಾಗಿದ್ದೇನೆ. ಬೇರೆ ರೀತಿ ಯಾವ ಯೋಚನೆಯೂ ಇಲ್ಲ ಯಾವುದೇ ಊಹಾಪೋಹಗಳಿಗೆ ಯಾರು ಕಿವಿಗೊಡಬಾರದು ಎಂದು ತಿಳಿಸಿದರು.

lok sabha election,bangalore south,tejaswini anantakumar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ