ಉತ್ತರ ಪ್ರದೇಶದಲ್ಲಿ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಉದ್ದಗಲಕ್ಕೂ ಪಕ್ಷದ ಪರ ಪ್ರಚಾರ ಮಾಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಕ್ಷದ ಮುಖ್ಯಸ್ಥ ಅಮಿತ್ ಶಾ ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಹೆಸರುಗಳನ್ನು ಕೈಬಿಡಲಾಗಿದೆ.

ಉತ್ತರ ಪ್ರದೇಶದ ಚುನಾವಣಾ ಕಣ ರಂಗೇರಿಸಲು ಬಿಜೆಪಿ ಬಿಡುಗಡೆಗೊಳಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಕ್ಷದ ಮುಖ್ಯಸ್ಥ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ಸೇರಿದಂತೆ 40 ಜನರ ಹೆಸರುಗಳು ಪಟ್ಟಿಯಲ್ಲಿವೆ.

ತಾರಾ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಮತ್ತು ಶಾ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದೂ, ಈ ಬಾರಿ ಕೂಡ ಬಿಜೆಪಿ 2014 ರ ಲೋಕಸಭಾ ಚುನಾವಣೆಯ ಯಶಸ್ಸನ್ನು ಪುನರಾವರ್ತಿಸುವ ಕನಸು ಹೊತ್ತಿದೆ.

2014ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ರಾಯ್ಬರೇಲಿ ಮತ್ತು ಅಮೇಥಿಗೆ ಅಂಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಸಹ, ಹೆಚ್ಚು ಸ್ಥಾನಗಳಲ್ಲಿ ತನ್ನ ಪ್ರಾಬಲ್ಯ ಹೊಂದಿದ್ದ ಬಹುಜನ ಸಮಾಜ ಪಕ್ಷವನ್ನು ಸಂಪೂರ್ಣವಾಗಿ ನಾಶಪಡಿಸಲಾಯಿತು. 70ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು.

ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಪಕ್ಷಗಳ ಪ್ರಾಬಲ್ಯ ನಿರ್ಧರಿಸುವಲ್ಲಿ ಉತ್ತರಪ್ರದೇಶದ ಪ್ರಮುಖ ಪಾತ್ರ ವಹಿಸಲಿದೆ. ಇನ್ನು ಪ್ರಧಾನಿ ಮೋದಿ ಉತ್ತರಪ್ರದೇಶದ ವಾರಣಾಸಿಯಿಂದ ಕಣದಲ್ಲಿದ್ದರೆ, ರಾಜನಾಥ್ ಸಿಂಗ್ ಉತ್ತರಪ್ರದೇಶದ ರಾಜಧಾನಿ ಲಕ್ನೋದಿಂದ ಸ್ಪರ್ಧಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ