ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿದ್ದು, ಉಭಯ ಪಕ್ಷಗಳು ಇಂದು ಮಹತ್ವದ ಸಭೆ ನಡೆಸಿದವು.
ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದ್ದು, ಬಿಜೆಪಿಗೆ ಎರಡಂಕಿ ಸ್ಥಾನ ದಾಟಲೂ ಬಿಡುವುದಿಲ್ಲ ಎಂದರು.
ಬಿಜೆಪಿ ಸೋಲಿಸುವುದೇ ನಮ್ಮ ಉದ್ದೇಶ ಎಂದರು. ಇನ್ನು ನನ್ನ ಕ್ಷೇತ್ರದ ಬಗ್ಗೆ ನಾನೇ ತೀರ್ಮಾನ ಕೈಗೊಳ್ಳುತ್ತೇನೆ. ತುಮಕೂರು ಕ್ಷೇತ್ರದ ಬಗ್ಗೆ ಏನನ್ನೂ ಹೇಳುವುದಿಲ್ಲ. ನನ್ನ ಸ್ಪರ್ಧೆ ಕ್ಷೇತ್ರದ ಬಗ್ಗೆ ಅವಸರ ಬೇಡ, ದೆಹಲಿಯಲ್ಲಿ ನನ್ನ ಅವಶ್ಯಕತೆ ಇದೆ ಎಂಬುದನ್ನು ನೋಡಿ ತೀರ್ಮಾನ ಕೈಗೊಳ್ಳುತ್ತೇನೆ ಈ ಬಗ್ಗೆ ಸಿದ್ದರಾಮಯ್ಯ, ಗುಂಡೂರಾವ್ ಸೇರಿದಂತೆ ಎಲ್ಲರ ಒಡಗೂಡಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಹಾಸನ ಕ್ಷೇತ್ರವನ್ನ ಪ್ರಜ್ವಲ್ ರೇವಣ್ಣಗೆ ನಾನೇ ಮೂರು ವರ್ಷಗಳ ಹಿಂದೆಯೇ ಸೀಟು ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದೆ ಎಂದು ತಿಳಿಸಿದರು.
ನಮ್ಮ ಎದುರಾಳಿ ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ, ರಾಹುಲ್ ಗಾಂಧಿ ಬಲಪಡಿಸುವುದೇ ನಮ್ಮ ಧ್ಯೇಯ. ಎಲ್ಲರೂ ಕುಳಿತು ಎಲ್ಲಿ ನಿಲ್ಲಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲಿಗೆ ನಾನು ಸಿದ್ದರಾಮಯ್ಯ ಒಟ್ಟಿಗೆ ಹೋಗುತ್ತೇವೆ. ಆ ಸಮಸ್ಯೆಗಳನ್ನ ಕುಳಿತು ಬಗೆ ಹರಿಸಿಕೊಳ್ಳುತ್ತೇವೆ. ಭಾರತೀಯ ಜನತಾ ಪಾರ್ಟಿ ಬಗ್ಗೆ ನನ್ನದೇ ಆದ ಕಟುವಾದ ನಿಲುವು ಇದೆ. ಬಿಜೆಪಿಯವರು 2 ಅಂಕಿ ದಾಟಲು ಯಾವುದೇ ಕಾರಣಕ್ಕೂ ಪಡೆಯಲು ನಾವು ಬಿಡಲ್ಲ ಎಂದು ಹೇಳಿದರು.
ನಾವು ಎರಡೂ ಪಕ್ಷಗಳು ಒಗ್ಗಟ್ಟಾಗಿ ಇದ್ದೇವೆ ಎನ್ನುವುದನ್ನ ತೋರಿಸಬೇಕಾಗಿದೆ ಎಂದ ಗೌಡರು, ನಾನೂ ಸಹಕರಿಸುತ್ತೇನೆ, ಸಿದ್ದರಾಮಯ್ಯನವರೂ ಇದ್ದಾರೆ, ಸಿಎಂ ಸಹ ಇಲ್ಲೇ ಇದ್ದಾರೆ. ಜಂಟಿ ಹೋರಾಟಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಈಗ ನಾನು ಹೆಚ್ಚೇನು ಹೇಳಲು ಹೋಗಲ್ಲ, ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ. ಮಾರ್ಚ್ 31 ರಂದು ಎರಡೂ ಪಕ್ಷಗಳು ಜಂಟಿ ಸಮಾರಂಭ ಮಾಡ್ತೇವೆ. ಈ ಬಗ್ಗೆ ವೇಣುಗೋಪಾಲ್ ಜತೆ ಚರ್ಚೆ ನಡೆಸಿದ್ದೇವೆ ಎಂದರು. ಅಲ್ಲದೇ ಘಟಬಂಧನ್ ಬಗ್ಗೆ ಬಹಳ ಮಾತನಾಡಿದ್ದಾರೆ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಅವರ ಚುಚ್ಚು ಮಾತುಗಳೇ ನಮಗೆ ಪ್ರಚೋದನೆ, ಮತ್ತು ನಮಗೆ ಬಲ ನೀಡಿವೆ.
lok sabha elections-2019,JDS-Congress,H D Devegowda