ಮೈತ್ರಿ ಸರ್ಕಾರದ 175 ದಿನಗಳ ಆಡಳಿತ: ಒಂದು ಅವಲೋಕನ

1. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳಾಗಿದೆ. ಐದು ತಿಂಗಳ ಅವಧಿಯಲ್ಲಿ ಮೈತ್ರಿ ಸರ್ಕಾರದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ಮಹತ್ತರ ಕ್ರಮಗಳನ್ನು ಕೈಗೊಂಡಿದ್ದೇವೆ
2. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 2018ರ ಫೆಬ್ರುವರಿಯಲ್ಲಿ ಮಂಡಿಸಿದ ಆಯವ್ಯಯ ಹಾಗೂ ಜುಲೈನಲ್ಲಿ ಮಂಡಿಸಿದ ನಮ್ಮ ಮೈತ್ರಿ ಸರ್ಕಾರದ ಆಯವ್ಯಯದ ಎಲ್ಲ ಜನಪರ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ಕ್ರಮ ವಹಿಸಲಾಗುತ್ತಿದೆ.
3. ಈ ಆಯವ್ಯಯ ಭಾಷಣಗಳಲ್ಲಿ ಮಾಡಿರುವ ಒಟ್ಟು 460 ಘೋಷಣೆಗಳಲ್ಲಿ ಬಹಳಷ್ಟು ಘೋಷಣೆಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಅಂದರೆ ಈ ಕಾರ್ಯಕ್ರಮಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ.
ರಾಜ್ಯದ ಹಣಕಾಸು ಸ್ಥಿತಿ: ನಿಗದಿತ ಗುರಿಗಿಂತ ಶೇ. 11 ರಷ್ಟು ಹೆಚ್ಚು ತೆರಿಗೆ ಸಂಗ್ರಹ
4. ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದ್ದು, ನಿಗದಿತ ಗುರಿಗಿಂತ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ.
5. ಸೆಪ್ಟೆಂಬರ್ ಅಂತ್ಯದ ವರೆಗೆ 75,634 ಕೋಟಿ ರೂ. ಗಳಷ್ಟು ವಿವಿಧ ತೆರಿಗೆಗಳ ಸಂಗ್ರಹವಾಗಿದ್ದು, ಶೇ. 11.4 ರಷ್ಟು ಹೆಚ್ಚಳವಾಗಿದೆ.
6. ಚುನಾವಣೆಯ ಹಿನ್ನೆಲೆಯಲ್ಲಿ ಆಯವ್ಯಯ ವೆಚ್ಚ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ. 38 ರಷ್ಟಾಗಿದ್ದು, 2013-14 ರಲ್ಲಿ ಈ ಅವಧಿಯಲ್ಲಿ ಶೇ. 37 ರಷ್ಟು ವೆಚ್ಚವಾಗಿತ್ತು. ಮಾರ್ಚ್ ವೇಳೆಗೆ ನಿರೀಕ್ಷಿತ ಗುರಿ ತಲುಪುವ ಆಶಾಭಾವನೆ ಇದೆ.

ಸಾಲ ಮನ್ನಾ ಯೋಜನೆ: ಬ್ಯಾಂಕುಗಳಿಂದ ಮಾಹಿತಿ ಸಂಗ್ರಹ- 15 ಬ್ಯಾಂಕುಗಳಿಂದ 10 ಲಕ್ಷ ರೈತರ ಬೆಳೆ ಸಾಲ ಮಾಹಿತಿ ಲಭ್ಯ
7. ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕುಗಳ 23.71 ಲಕ್ಷ ರೈತರಿಗೆ ಹಾಗೂ ಸಹಕಾರ ಸಂಘಗಳ 20.38 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ವಿವಿಧ ಬ್ಯಾಂಕುಗಳಿಂದ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ.
ಸಾಲ ಮನ್ನಾ ಯೋಜನೆ ಕುರಿತು ಟಿಪ್ಪಣಿ
8. ಸಾಲಮನ್ನಾ ಯೋಜನೆಯನ್ನು ಆಯವ್ಯಯದಲ್ಲಿ ಘೋಷಿಸಿದಂತೆ ಅನುಷ್ಠಾನಗೊಳಿಸಲಾಗುತ್ತಿದೆ.
9. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅತ್ಯಂತ ತ್ವರಿತವಾಗಿ ಈ ಯೋಜನೆ ಜಾರಿಯಾಗುತ್ತಿದೆ.
10. ಇದಕ್ಕಾಗಿ ಭೂದಾಖಲೆ ಮತ್ತು ಸರ್ವೇಕ್ಷಣಾ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್ ನೇತೃತ್ವದ ತಂಡವು ವಿಶೇಷ ಸಾಫ್ಟ್‍ವೇರನ್ನು ಅಭಿವೃದ್ಧಿ ಪಡಿಸಿದ್ದು, ಮಾಹಿತಿ ಸಂಗ್ರಹ, ಖಾತರಿ ಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.
11. ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ಪಾವತಿಸಬೇಕಾಗಿರುವುದರಿಂದ ಹಾಗೂ ಈ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಬೇಕಾಗಿರುವುದರಿಂದ ಸಂಗ್ರಹಿಸಿದ ದತ್ತಾಂಶವನ್ನು ಖಾತರಿ ಪಡಿಸಿಕೊಳ್ಳಬೇಕಾಗುತ್ತದೆ.
12. ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರ ಮಾಹಿತಿಯನ್ನು ಸಿಬಿಎಸ್ (ಕೋರ್ ಬ್ಯಾಂಕಿಂಗ್ ಸಿಸ್ಟಮ್) ತಂತ್ರಾಂಶದಿಂದ ಈಗಾಗಲೇ ಪಡೆಯಲಾಗಿದ್ದು, ಇದನ್ನು ರಾಜ್ಯದಲ್ಲಿರುವ ಏಳು ಸಾವಿರಕ್ಕೂ ಹೆಚ್ಚು ಶಾಖೆಗಳಿಗೆ ಈ ಮಾಹಿತಿಯನ್ನು ಕಳುಹಿಸಿ ಖಾತರಿಪಡಿಸಿಕೊಳ್ಳಲಾಗುತ್ತಿದೆ. ಈ ಬ್ಯಾಂಕುಗಳಿಂದ ಮಾಹಿತಿ ಬಂದ ತಕ್ಷಣ ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭಿಸಲಾಗುವುದು.
13. ಈಗಾಗಲೇ ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲಾಗಿದೆ. ಈ ಎರಡು ತಾಲ್ಲೂಕುಗಳ 50 ಶಾಖೆಗಳಲ್ಲಿ 21 ಸಾವಿರಕ್ಕೂ ಹೆಚ್ಚು ಸಾಲದ ಖಾತೆಗಳಿದ್ದು, ನವೆಂಬರ್ 12 ರಿಂದ ರೈತರು ಬ್ಯಾಂಕುಗಳಿಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಎರಡು ದಿನದಲ್ಲಿ 500 ರೈತರು ಭೇಟಿ ನೀಡಿ ದಾಖಲೆ ಒದಗಿಸಿದ್ದಾರೆ.
14. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಈ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲಾಗುತ್ತಿದೆ. ಉದಾಹರಣೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ಜೂನ್ 2017 ರಲ್ಲಿ ಸರ್ಕಾರಿ ಆದೇಶ ಹೊರಡಿಸಿದರೂ, ಡಿಸೆಂಬರ್ ತಿಂಗಳಲ್ಲಿ ಅನುಷ್ಠಾನಗೊಳಿಸಲಾಯಿತು. ನಮ್ಮ ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈಗಾಗಲೇ ಸರ್ಕಾರ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಇದನ್ನು ಎಲ್ಲ ತಾಲ್ಲೂಕುಗಳಲ್ಲಿ ಜಾರಿಗೊಳಿಸಲಾಗುತ್ತಿದೆ.
15. ಈ ಯೋಜನೆಯಲ್ಲಿ ಅನುದಾನ ಇಲೆಕ್ಟ್ರಾನಿಕ್ ಟ್ರಾನ್ಸ್‍ಫರ್ ಆಗುವುದರಿಂದ ತ್ವರಿತವಾಗಿ ಪೂರ್ಣಗೊಳ್ಳಲಿದೆ. ಆದರೆ ಮಾಹಿತಿ ಖಾತರಿ ಪಡಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುವುದು. ಹಾಗೂ ಬ್ಯಾಂಕುಗಳು ಮಾಹಿತಿ ಪರಿಶೀಲನೆ ಪೂರ್ಣಗೊಳಿಸಿದ ತಕ್ಷಣ ರೈತರಿಗೆ ದಾಖಲೆಗಳನ್ನು ಒದಗಿಸಲು ದಿನಾಂಕ ಘೋಷಣೆ ಮಾಡಲಾಗುವುದು. ಅನಂತರ ಅವರು ತಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡಿನ ಪ್ರತಿಯನ್ನು ಆಯಾ ಬ್ಯಾಂಕಿನ ಶಾಖೆಯಲ್ಲಿ ನೀಡಬೇಕು.
16. ಸಹಕಾರಿ ಬ್ಯಾಂಕುಗಳಲ್ಲಿ ಬ್ಯಾಂಕಿನ ಸಿಬ್ಬಂದಿಯೇ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಶೀಘ್ರವೇ ಮಾಹಿತಿ ಪರಿಶೀಲನೆ ಪೂರ್ಣಗೊಳ್ಳಲಿದೆ.
17. ಈ ವರ್ಷ ಆಯವ್ಯಯದಲ್ಲಿ ಸಾಲಮನ್ನಾ ಯೋಜನೆಗೆ 6500 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ.
18. ಸರ್ಕಾರವು ಸಾಲಮನ್ನಾ ಯೋಜನೆಗೆ ಪ್ರತ್ಯೇಕ ಸಂಪನ್ಮೂಲ ಕ್ರೋಢೀಕರಣ ವ್ಯವಸ್ಥೆ ರೂಪಿಸಿದೆ. ಆಯವ್ಯಯದ ಇತರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಇದರಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟ ಪಡಿಸಿದೆ.
ರಾಷ್ಟ್ರಪತಿಗಳ ಅಂಗಳದಲ್ಲಿ ಋಣ ಪರಿಹಾರ ಕಾಯ್ದೆ 2018
19. ಸಣ್ಣ ರೈತರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳು, ಬಡ ಜನರಿಗೆ ಬಡ್ಡಿ ವ್ಯಾಪಾರಿಗಳು, ಲೇವಾದೇವಿದಾರರ ಕಿರುಕುಳದಿಂದ ಮುಕ್ತಿ ದೊರಕಿಸಲು ಋಣ ಪರಿಹಾರ ಕಾಯ್ದೆ 2018ನ್ನು ರೂಪಿಸಲಾಗಿದ್ದು, ರಾಷ್ಟ್ರಪತಿಗಳ ಅಂಕಿತವನ್ನು ನಿರೀಕ್ಷಿಸಲಾಗುತ್ತಿದೆ. ಕಾಯ್ದೆಯ ರೂಪುರೇಷೆಗಳನ್ನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಹಾಗೂ ಗೃಹ ಸಚಿವರಿಗೆ ಖುದ್ದು ಭೇಟಿ ಮಾಡಿ ವಿವರಿಸಲಾಗಿದೆ.
ಕೊಡಗು ಅಭಿವೃದ್ಧಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕೊಡಗು ಪುನರ್‍ನಿರ್ಮಾಣ ಪ್ರಾಧಿಕಾರ ರಚನೆ:
20. ಈ ವರ್ಷ ಆಗಸ್ಟ್ ತಿಂಗಳಿನಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅಪಾರ ಆಸ್ತಿ ನಷ್ಟ ಸಂಭವಿಸಿದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸಿದೆ. ಉಪಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಜಿಲ್ಲೆಗೆ ಭೇಟಿ ನೀಡಿ, ತಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದಾರೆ.
21. ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದು, ಅವರ ಇಚ್ಛೆಗೆ ಅನುಗುಣವಾಗಿ ಮನೆ ನಿರ್ಮಿಸಿ ಕೊಡಲಾಗುವುದು.
22. ಈ ವರೆಗೆ ಕೊಡಗು ಜಿಲ್ಲೆಗೆ ರಾಜ್ಯ ಸರ್ಕಾರ 127 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ.
23. ಪ್ರಕೃತಿಯ ಕೋಪಕ್ಕೆ ಜರ್ಝರಿತವಾಗಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಿಸುವುದು ಸರ್ಕಾರದ ಆದ್ಯತೆ. ಇದನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರವನ್ನು ರಚನೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
24. ಕೊಡಗು ಜಿಲ್ಲೆಯ ಸಂಕಷ್ಟಕ್ಕೆ ಸಾರ್ವಜನಿಕರು ಅಭೂತಪೂರ್ವ ಬೆಂಬಲ ನೀಡಿದ್ದು, ಈ ವರೆಗೆ 187.16 ಕೋಟಿ ರೂ. ಗಳ ದೇಣಿಗೆ ಹರಿದುಬಂದಿದೆ. ಇದಲ್ಲದೆ ಪರಿಹಾರ ಕಾರ್ಯಕ್ಕೆ ಸ್ವಯಂ ಪ್ರೇರಿತರಾಗಿ ಸಾರ್ವಜನಿಕರು ಕೈಜೋಡಿಸಿದ್ದಾರೆ; ವಿವಿಧ ವಸ್ತುಗಳು, ಆಹಾರ ವಸ್ತುಗಳನ್ನು ಒದಗಿಸಿ ನೆರವಿಗೆ ಧಾವಿಸಿದ್ದಾರೆ. ಇನ್‍ಫೋಸಿಸ್ ಪ್ರತಿಷ್ಠಾನವು 25 ಕೋಟಿ ರೂ. ಗಳ ನೆರವು ನೀಡುವುದಾಗಿ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ ಅವರು ಘೋಷಿಸಿದ್ದಾರೆ.
25. ಸಾರ್ವಜನಿಕರ ಹಣ ಒಂದಿಷ್ಟೂ ಪೋಲಾಗದಂತೆ ಕೊಡಗಿನ ಸಂತ್ರಸ್ತರ ಕ್ಷೇಮಾಭಿವೃದ್ಧಿಗಾಗಿ ಈ ದೇಣಿಗೆಯನ್ನು ಅತ್ಯಂತ ಪಾರದರ್ಶಕವಾಗಿ ಬಳಸಲಾಗುವುದು.
ಯಶಸ್ವಿ ದಸರಾ: ಮುಂದಿನ ಬಾರಿ ಪ್ರವಾಸೋದ್ಯಮ ಕೇಂದ್ರಿತ ದಸರಾ- ನೀಲನಕ್ಷೆ ತಯಾರಿಗೆ ಸೂಚನೆ; ನವೆಂಬರ್ 1 ರಿಂದ ಜಾನಪದ ಜಾತ್ರೆಗೆ ಮರುಚಾಲನೆ
26. ಮೈಸೂರು ದಸರಾ ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ, ಯಶಸ್ವಿಯಾಗಿ ನೆರವೇರಿಸಲಾಯಿತು. ಇನ್‍ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ದಸರಾ ಉದ್ಘಾಟಿಸಿ, ಈ ಉತ್ಸವಕ್ಕೆ ವಿಶೇಷ ಮೆರುಗು ತಂದರು.
27. ದಸರಾ ಉತ್ಸವದ 10 ದಿನಗಳಲ್ಲೂ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಉತ್ಸಾಹದಿಂದ ಭಾಗವಹಿಸಿದ್ದು ಈ ಬಾರಿಯ ವಿಶೇಷ.
28. ಈ 10 ದಿನಗಳಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿರುವುದಾಗಿ ಅಂದಾಜಿಸಲಾಗಿದೆ. ದಸರಾ ಮೆರವಣಿಗೆಯನ್ನು ವೀಕ್ಷಿಸಲು 10-12 ಲಕ್ಷ ಪ್ರವಾಸಿಗರು ಆಗಮಿಸಿದ್ದರು.
29. ದಸರಾ ಉತ್ಸವ ವೀಕ್ಷಿಸಿದ ಕೇಂದ್ರ ಸಚಿವ ಸುರೇಶ್ ಪ್ರಭು ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
30. ಮುಂದಿನ ವರ್ಷ ದಸರಾವನ್ನು ಇನ್ನಷ್ಟು ವೈವಿಧ್ಯಮಯವಾಗಿ, ಪ್ರವಾಸೋದ್ಯಮ ಕೇಂದ್ರಿತವಾಗಿ ರೂಪಿಸಲು ನೀಲನಕ್ಷೆ ಸಿದ್ಧಪಡಿಸುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
31. ಇದಲ್ಲದೆ ದಸರಾ ಸಂದರ್ಭದಲ್ಲಿ ನಡೆದ ಜಾನಪದ ಜಾತ್ರೆಯಲ್ಲಿ ನೂರಾರು ಕಲಾವಿದರು ಭಾಗವಹಿಸಿದ್ದರು. ಅಳಿವಿನಂಚಿಗೆ ಸರಿಯುತ್ತಿರುವ ಜಾನಪದ ಕಲೆಗಳನ್ನು ಮತ್ತೆ ಮುನ್ನೆಲೆಗೆ ತರಲು ಹಾಗೂ ಕಲಾವಿದರಿಗೆ ಬೆಂಬಲ ನೀಡಲು ನವೆಂಬರ್ 1 ರಿಂದ ಜಾನಪದ ಜಾತ್ರೆಯನ್ನು ಮತ್ತೆ ಪ್ರಾರಂಭಿಸಲಾಗುತ್ತಿದೆ. ರಾಜ್ಯದ ಆರು ಸ್ಥಳಗಳಲ್ಲಿ ಅಂದು ಜಾನಪದ ಜಾತ್ರೆ ಏರ್ಪಡಿಸಲಾಗುತ್ತಿದೆ.
ಕೈಗಾರಿಕಾ ಕ್ಲಸ್ಟರ್‍ಗಳ ಸ್ಥಾಪನೆಗೆ ಉದ್ಯಮಿಗಳ ಬೆಂಬಲ- ವಿಷನ್ ಗ್ರೂಪ್‍ಗಳಿಂದ ಅಧ್ಯಯನ- ಶೀಘ್ರವೇ ವರದಿ ಸಲ್ಲಿಕೆ
32. ರಾಜ್ಯ ಸರ್ಕಾರವು ‘ಕಾಂಪೀಟ್ ವಿತ್ ಚೈನಾ’ ಎಂಬ ಯೋಜನೆಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ಈ ವರ್ಷ 500 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
33. ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಮೂಲಕ ಸ್ಥಳೀಯ ಸಂಪನ್ಮೂಲಗಳ ಬಳಕೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
34. ಈ ಯೋಜನೆಯಡಿ ಕಲಬುರಗಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣಗಳ ತಯಾರಿಕೆ, ಬೀದರ್‍ನಲ್ಲಿ ಕೃಷಿ ಉಪಕರಣಗಳ ತಯಾರಿಕೆ, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳು, ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕೆ, ಮೈಸೂರಿನಲ್ಲಿ ಪಿಸಿಬಿ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ತಯಾರಿಕೆ, ಚಿತ್ರದುರ್ಗದಲ್ಲಿ ಎಲ್‍ಇಡಿ ಲೈಟ್ ತಯಾರಿಕೆ ಹಾಗೂ ತುಮಕೂರಿನಲ್ಲಿ ಕ್ರೀಡೆ ಮತ್ತು ಫಿಟ್‍ನೆಸ್ ಉಪಕರಣಗಳ ತಯಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ.
35. ಈ ಉದ್ಯಮ ವಲಯಗಳ ಮುಂಚೂಣಿಯ ಉದ್ಯಮಿಗಳನ್ನೊಳಗೊಂಡ ವಿಷನ್ ಗ್ರೂಪ್‍ಗಳನ್ನು ರಚಿಸಲಾಗಿದ್ದು, ಈಗಾಗಲೇ ಅವರೊಂದಿಗೆ ಸಂವಾದ ನಡೆಸಲಾಗಿದೆ. ಈ ತಂಡದ ಸದಸ್ಯರು, ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ, ಉದ್ಯಮ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಿಸಲು ಅಗತ್ಯ ಸಲಹೆ, ಮಾರ್ಗದರ್ಶನ ನೀಡಲಿದೆ. ಅದರಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
36. ಪ್ರತಿ ವಲಯದಲ್ಲಿ 5000 ಕೋಟಿ ರೂ. ಹೂಡಿಕೆ ನಿರೀಕ್ಷೆಯಿಂದ ತಲಾ ಒಂದು ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.
37. ಶಾಹಿ ಎಕ್ಸ್‍ಪೋಟ್ರ್ಸ್, ಅರವಿಂದ ಮಿಲ್ಸ್, ರೇಮಂಡ್ಸ್, ಫನ್‍ಸ್ಕೂಲ್, ಲೆಗೊ, ಟಾಫೆ, ಹಿಂಡ್‍ವೇರ್, ಹ್ಯಾವೆಲ್ಸ್, ಟಾಟಾ ಸೋಲಾರ್ ಮುಂತಾದ ಪ್ರತಿಷ್ಠಿತ ಕಂಪೆನಿಗಳು ವಿಷನ್ ಗ್ರೂಪ್‍ಗಳ ಸದಸ್ಯರಾಗಿ ಉತ್ಸಾಹದಿಂದ ಸಹಕಾರ ನೀಡುತ್ತಿದ್ದಾರೆ.
38. ರಾಜ್ಯ ಸರ್ಕಾರವು 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಿದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಗುರಿ.
ಬೆಂಗಳೂರು ಅಭಿವೃದ್ಧಿಗೆ ವಿಶೇಷ ಆದ್ಯತೆ: ಪೆರಿಫೆರಲ್ ರಿಂಗ್ ರಸ್ತೆ, ಎಲಿವೇಟೆಡ್ ಕಾರಿಡಾರ್ ಯೋಜನೆ ಜಾರಿಗೆ ಸಿದ್ಧತೆ- ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ನಂತರ ಯೋಜನೆ ಜಾರಿ
39. ಜಾಗತಿಕ ನಕ್ಷೆಯಲ್ಲಿ ಸ್ಥಾನ ಪಡೆದಿರುವ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ, ಮಾಲಿನ್ಯ ಅತಿ ದೊಡ್ಡ ಸವಾಲು. ಸಂಚಾರ ದಟ್ಟಣೆ ನಿವಾರಣೆಗೆ ರಸ್ತೆಗಳ ದುರಸ್ತಿ, ಅಭಿವೃದ್ಧಿ, ಮೇಲು ಸೇತುವೆ ನಿರ್ಮಾಣ, ಮೆಟ್ರೋ 3ನೇ ಹಂತದ ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆ, ಎಲೆವೇಟೆಡ್ ಕಾರಿಡಾರ್ ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
40. ಉಪಮುಖ್ಯಮಂತ್ರಿಗಳು ನಿಯಮಿತವಾಗಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸುವುದಲ್ಲದೆ, ಖುದ್ದು ಸ್ಥಳ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ
41. ಎಲಿವೇಟೆಡ್ ಕಾರಿಡಾರ್: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆಗೊಳಿಸಲು 14540 ಕೋಟಿ ರೂ ಅಂದಾಜು ವೆಚ್ಚದಲ್ಲಿ ಒಟ್ಟು 102 ಕಿಲೋಮೀಟರ್ ಉದ್ದದ ಆರು ಕಾರಿಡಾರ್‍ಗಳನ್ನು ಐದು ಹಂತಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
42. ಈ ಯೋಜನೆಯಿಂದ ಇಂಧನ ಹಾಗೂ ಸಂಚಾರದ ಸಮಯ ಉಳಿತಾಯದ ಮೂಲಕ ವಾರ್ಷಿಕ 9397 ಕೋಟಿ ರೂ. ಉಳಿತಾಯ ಆಗಬಹುದು ಎಂದು ಅಂದಾಜಿಸಲಾಗಿದೆ.
43. ವಾಹನ ದಟ್ಟಣೆ ಸುಗಮವಾಗುವುದರಿಂದ 4.74 ಲಕ್ಷ ಟನ್‍ಗಳಷ್ಟು ಇಂಗಾಲಾಮ್ಲದ ಹೊರಸೂಸುವಿಕೆ ಕಡಿಮೆಯಾಗುವುದು ಎಂದು ಅಂದಾಜಿಸಲಾಗಿದೆ.
44. ಪ್ರಸ್ತುತ ಈ ಯೋಜನೆಯ ಎನ್ವಿರಾನ್‍ಮೆಂಟ್ ಇಂಪ್ಯಾಕ್ಟ್ ಅಸೆಸ್‍ಮೆಂಟ್ ವರದಿ ತಯಾರಿಸಲಾಗುತ್ತಿದೆ.
45. ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುವುದು; ನಂತರವೇ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
46. ಪೆರಿಫೆರಲ್ ರಿಂಗ್ ರಸ್ತೆ: ಸುಮಾರು 6500 ಕೋಟಿ ರೂ. ವೆಚ್ಚದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಈ ಯೋಜನೆಗೆ ಹೈಬ್ರಿಡ್ ಆನ್ಯುಟಿ ಮಾದರಿಯಲ್ಲಿ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು.
47. ಭೂಸ್ವಾಧೀನ ಪ್ರಕ್ರಿಯೆಗೆ ಇಂದು ಅತಿ ಹೆಚ್ಚು ಅನುದಾನ ಅಗತ್ಯವಿದೆ. ಇದನ್ನು ಕಡಿಮೆಗೊಳಿಸಲು ಇರುವ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
48. ಘನತ್ಯಾಜ್ಯ ವಿಲೇವಾರಿ, ಬೆಂಗಳೂರು ನಗರದ ಅತಿ ದೊಡ್ಡ ಸವಾಲುಗಳಲ್ಲಿ ಒಂದು. ಇದನ್ನು ಸಮರ್ಥವಾಗಿ ಪಾರದರ್ಶಕವಾಗಿ ನಿಭಾಯಿಸುವುದು ಸರ್ಕಾರದ ಆದ್ಯತೆ. ಒಂದೂಕಾಲು ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಪ್ರತಿ ದಿನ ಸರಾಸರಿ 4000-4200 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರ ವೈಜ್ಞಾನಿಕ ವಿಲೇವಾರಿಗೆ ಹಲವು ಅಡೆತಡೆಗಳಿವೆ. ಅಸಮರ್ಪಕ ತ್ಯಾಜ್ಯ ವಿಂಗಡಣೆ, ತ್ಯಾಜ್ಯ ಸಂಸ್ಕøಣಾ ಸಾಮಥ್ರ್ಯದ ಅಸಮರ್ಪಕ ಬಳಕೆ, ಗುತ್ತಿಗೆದಾರರ ಅಸಮರ್ಪಕ ಕಾರ್ಯನಿರ್ವಹಣೆ, ಸ್ಥಳೀಯರ ಪ್ರತಿರೋಧದಂತಹ ಸಮಸ್ಯೆಗಳಿವೆ. ಅವುಗಳನ್ನು ನಿವಾರಿಸಲು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಸುಸ್ಥಿರ ಕೃಷಿಗೆ ಇಸ್ರೇಲ್ ಮಾದರಿ ಕೃಷಿ ಪದ್ಧತಿ: ಸಮಿತಿ ವರದಿ ಸಲ್ಲಿಕೆ
49. ಸುಸ್ಥಿರ ಮತ್ತು ಲಾಭದಾಯಕ ಕೃಷಿ ಪದ್ಧತಿ ಅಳವಡಿಸುವ ಮೂಲಕ ರೈತರ ಬದುಕು ಹಸನುಗೊಳಿಸುವ ಆಶಯ ಸರ್ಕಾರದ್ದು. ಇದಕ್ಕಾಗಿ ಈ ವರ್ಷ ಎರಡು ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದೆ.
50. ಇಸ್ರೇಲ್ ಮಾದರಿ ಕೃಷಿ ಪದ್ಧತಿ: ಕೃಷಿ ಪದ್ಧತಿಯಲ್ಲಿ ನಿಖರತೆ, ಆಧುನಿಕ ತಂತ್ರಜ್ಞಾನ ಬಳಕೆಯ ಮೂಲಕ ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಹಾಗೂ ನೀರಿನ ಸಮರ್ಪಕ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಒಟ್ಟು 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ಪ್ರತಿ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಜಮೀನಿಗೆ ಈ ಪದ್ಧತಿ ಅಳವಡಿಸಲು ಒಟ್ಟು 300 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ.
51. ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಅಧ್ಯಯನ ನಡೆಸಿ, ಅನುಷ್ಠಾನದ ವಿಧಾನದ ಕುರಿತು ವರದಿ ನೀಡಲು ಸಹಕಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
52. ಈಗಾಗಲೇ ಕೃಷಿ ಸಚಿವರು, ತೋಟಗಾರಿಕೆ ಸಚಿವರು ಹಾಗೂ ಅಧಿಕಾರಿಗಳನ್ನೊಳಗೊಂಡ ನಿಯೋಗವು ಸೆಪ್ಟೆಂಬರ್ ತಿಂಗಳಿನಲ್ಲಿ ಇಸ್ರೇಲ್‍ಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ.
53. ಸಮಿತಿಯು 7 ಸಭೆಗಳನ್ನು ನಡೆಸಿದೆಯಲ್ಲದೆ 7 ಬಾರಿ ಕ್ಷೇತ್ರ ಭೇಟಿ ಮಾಡಿದ್ದು, ಕೃಷಿ ಮತ್ತು ತೋಟಗಾರಿಕಾ ಸಚಿವರೊಂದಿಗೆ ಶಿಫಾರಸಿನ ಕುರಿತು ಚರ್ಚೆ ನಡೆಸಿದೆ. ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿಯೂ ಈ ಕುರಿತು ಚರ್ಚಿಸಿ, ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು.
54. ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ: ಕೃಷಿ ಉತ್ಪಾದನಾ ವೆಚ್ಚ ಕಡಿಮೆಗೊಳಿಸಿ, ಮಣ್ಣಿನ ಫಲವತ್ತತೆ ಸಂರಕ್ಷಿಸುವ ನಿಟ್ಟಿನಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿ ಜಾರಿಗೆ ಕ್ರಮ ವಹಿಸಲಾಗುತ್ತಿದೆ. ಆಯವ್ಯಯದಲ್ಲಿ 50 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಶಿಕ್ಷಣಕ್ಕೆ ಆದ್ಯತೆ: ಸಾವಿರ ಕೋಟಿ ವೆಚ್ಚದಲ್ಲಿ ಶಾಲೆ-ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ- ಕ್ರಿಯಾ ಯೋಜನೆಗೆ ಅನುಮೋದನೆ
55. 1200 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಮೂಲಸೌಲಭ್ಯಕ್ಕೆ 450 ಕೋಟಿ ರೂ. ಗಳ ಕ್ರಿಯಾಯೋಜನೆಗೆ ಮಂಜೂರಾತಿ ನೀಡಲಾಗಿದೆ. 1521 ಶಾಲೆ/ ಪದವಿಪೂರ್ವ ಕಾಲೇಜುಗಳಲ್ಲಿ 2711 ಕೊಠಡಿಗಳು, 86 ಪ್ರಯೋಗಾಲಯಗಳು ಹಾಗೂ 154 ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.
56. 66 ಸರ್ಕಾರಿ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‍ಗಳು, 8 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಮೂಲಸೌಕರ್ಯಕ್ಕೆ 470.37 ಕೋಟಿ ರೂ. ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ.
57. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಬೋಧನಾ ಕೊಠಡಿ, ಪ್ರಯೋಗಾಲಯ, ಶೌಚಾಲಯ, ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸಲು, ಉನ್ನತೀಕರಿಸಲು ಈಗಾಗಲೇ ಶಾಲಾ ಕಾಲೇಜುಗಳನ್ನು ಗುರುತಿಸಲಾಗಿದ್ದು, ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ.
58. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ.
59. ಪದವೀಧರರ ಎಂಪ್ಲಾಯೇಬಿಲಿಟಿ ಅನುಪಾತ ಅತಿ ಕಡಿಮೆ ಇರುವುದನ್ನು ಗಮನಿಸಿರುವ ಸರ್ಕಾರ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಮೂರು ಕೌಶಲ್ಯಾಧಾರಿತ ವಿಶ್ವವಿದ್ಯಾಲಯ ಸ್ಥಾಪನೆಗೆ ತೀರ್ಮಾನ ಕೈಗೊಂಡಿದೆ. ಆಯವ್ಯಯದಲ್ಲಿ 9 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

‘ಶಾಲಾ ಸಂಪರ್ಕ ಸೇತು’ ಹೊಸ ಯೋಜನೆ
60. ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ತೋಡು, ಹಳ್ಳ-ಕೊಳ್ಳಗಳನ್ನು ದಾಟಲು ಬಳಸುವ ಅಪಾಯಕಾರಿ ಸ್ಥಿತಿಯಲ್ಲಿರುವ ಸಣ್ಣ ತೂಗುಸೇತುವೆ, ಕಾಲು ಸಂಕಗಳ ಬದಲಿಗೆ ಶಾಶ್ವತ ಸೇತುವೆಗಳನ್ನು ನಿರ್ಮಿಸಲು ಶಾಲಾ ಸಂಪರ್ಕ ಸೇತು ಯೋಜನೆಯನ್ನು ಹೊಸದಾಗಿ ರೂಪಿಸಲಾಗಿದೆ.
61. ಮೊದಲ ಹಂತದಲ್ಲಿ ಕರಾವಳಿ ಭಾಗದ 3 ಜಿಲ್ಲೆಗಳು ಹಾಗೂ ಮಲೆನಾಡು ಭಾಗದ 4 ಜಿಲ್ಲೆಗಳ ಒಟ್ಟು 444 ತೂಗುಸೇತುವೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಶಾಶ್ವತ ಸಂಪರ್ಕ ಸೇತುವೆ ನಿರ್ಮಿಸಲಾಗುವುದು.
62. ಇದಕ್ಕಾಗಿ ಪ್ರಸಕ್ತ ವರ್ಷ 100 ಕೋಟಿ ರೂ. ಅನುದಾನ ಒದಗಿಸಲಾಗಿದೆ.
63. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಚುರುಕು: ರಾಜ್ಯದಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಇರುವ ಅಡೆತಡೆಗಳನ್ನು ನಿವಾರಿಸಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆಗಳನ್ನು ಕಾಲ ಕಾಲಕ್ಕೆ ನಡೆಸಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ, ವಿದ್ಯುತ್ ಕಂಬಗಳ ಸ್ಥಳಾಂತರ ಮತ್ತಿತರ ಸಮಸ್ಯೆಗಳನ್ನು ಸಮನ್ವಯ ವಹಿಸಿ ಶೀಘ್ರವಾಗಿ ಪರಿಹರಿಸಿ ಕ್ರಮ ಕೈಗೊಳ್ಳಲು ಇದರಿಂದ ಅನುಕೂಲವಾಗಿದೆ.
64. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ 3 ರ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಹಂತ 4 ರಡಿ 3,500 ಕೋಟಿ ರೂ ವೆಚ್ಚದಲ್ಲಿ 2720 ಕಿ.ಮೀ. ಉದ್ದದ ರಸ್ತೆ ಸುಧಾರಣೆ ಕೈಗೊಳ್ಳಲು ಉದ್ದೇಶಿಸಿದೆ.
ದೆಹಲಿ ಭೇಟಿ: ಕೇಂದ್ರದಿಂದ ಹೆಚ್ಚಿನ ನೆರವು ಪಡೆಯುವ ಪ್ರಯತ್ನ, ವಿವಿಧ ಸಮಸ್ಯೆಗಳಿಗೆ ಪರಿಹಾರ
65. ಒಟ್ಟು ಏಳು ಬಾರಿ ದೆಹಲಿಗೆ ಭೇಟಿ ನೀಡಿದ್ದು, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಉತ್ತಮ ಸ್ಪಂದನೆ ದೊರೆತಿದೆ.
66. ಇದರ ಫಲವಾಗಿ ಸುಮಾರು 2500 ಕೋಟಿ ರೂ. ಗಳಿಗೆ ಹೆಚ್ಚು ಅನುದಾನ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ಸು ಲಭಿಸಿದೆ.
67. ಬೆಂಗಳೂರು ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ಹಸ್ತಾಂತರಕ್ಕೆ ಇರುವ ತೊಡಕುಗಳನ್ನು ಕೇಂದ್ರ ರಕ್ಷಣಾ ಸಚಿವರಿಗೆ ಮನವರಿಕೆ ಮಾಡಿ, ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಇರುವ ತೊಡಕುಗಳನ್ನು ನಿವಾರಿಸಲಾಗಿದೆ.
68. ಮೊದಲ ಬಾರಿಗೆ ಹೆಸರು ಬೆಳೆಗೆ ಸಕಾಲದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಲು ಸಾಧ್ಯವಾಗಿದೆ.
69. ಅಲ್ಲದೆ ಹಿಂದಿನ ಬಾಕಿ 954 ಕೋಟಿ ರೂ. ಬಿಡುಗಡೆಗೂ ಅಗತ್ಯ ದಾಖಲೆ, ಮಾಹಿತಿಗಳನ್ನು ಒದಗಿಸಲಾಗಿದ್ದು, ಶೀಘ್ರವೇ ಈ ಮೊತ್ತ ಬಿಡುಗಡೆಯಾಗುವ ನಿರೀಕ್ಷೆ ಇದೆ.
70. ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಮೆಗಾ ಡೈರಿ ಸ್ಥಾಪನೆಗೆ ನೆರವು, ಕೃಷಿ ಮಾರುಕಟ್ಟೆ ಉನ್ನತೀಕರಣ ಮತ್ತಿತರ ವಿಷಯಗಳ ಕುರಿತು ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.
71. ಇದಲ್ಲದೆ ಇತ್ತೀಚೆಗೆ ಮೈಸೂರು ದಸರಾ ಉತ್ಸವಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ, ರಾಜ್ಯದ ಕಾಫಿ, ತಂಬಾಕು ಹಾಗೂ ಏಲಕ್ಕಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಿದ್ದು, ಇವುಗಳ ಪರಿಹಾರಕ್ಕೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ವಿಶೇಷ ಘಟಕ ಯೋಜನೆಯಡಿ ದಾಖಲೆಯ 29 ಸಾವಿರ ಕೋಟಿ ಅನುದಾನ ನಿಗದಿ
72. ಎಸ್‍ಸಿಪಿ / ಟಿಎಸ್‍ಪಿ ಯೋಜನೆಯಡಿ ದಾಖಲೆಯ 29 ಸಾವಿರ ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಅನುದಾನದ ಸದ್ಬಳಕೆಗೆ ಮೊದಲ ಬಾರಿ ಸ್ಪಷ್ಟ ಮಾರ್ಗಸೂಚಿ ರಚನೆ ಮಾಡಲಾಗಿದ್ದು, ಅನುದಾನ ವೆಚ್ಚ ಮಾಡದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವ ನಿಯಮವನ್ನು ಈ ಬಾರಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
73. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ವಿದ್ಯಾರ್ಥಿ ವೇತನ ಪಾವತಿಗೆ ಕ್ರಮ ವಹಿಸಲಾಗಿದ್ದು, ಇದರಿಂದ 56.69 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ.
ಜನತಾ ದರ್ಶನ- 17 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ, ಶೇ. 50ರಷ್ಟು ಇತ್ಯರ್ಥ
74. ಸಾರ್ವಜನಿಕರ ಸಮಸ್ಯೆಗೆ ನೇರವಾಗಿ ಸ್ಪಂದಿಸುವ ವೇದಿಕೆ ಜನತಾದರ್ಶನ. ಸೆಪ್ಟೆಂಬರ್ 1 ರಿಂದ ಅಧಿಕೃತ ಚಾಲನೆ ನೀಡಲಾಗಿದೆ. ನಿರುದ್ಯೋಗ, ಸಾಲದ ಸಮಸ್ಯೆ, ಓದಿಗೆ ನೆರವು, ಹೀಗೆ ಜನರು ಸಂಕಷ್ಟಗಳಿಗೆ ನೇರ ಪರಿಹಾರ ಒದಗಿಸಲು ತಿಂಗಳಿಗೊಮ್ಮೆ ಜನತಾ ದರ್ಶನ ನಡೆಸಲಾಗುವುದು.
75. ಜೂನ್ 1 ರಿಂದ ಈ ವರೆಗೆ ಬೆಂಗಳೂರು, ಬೆಳಗಾವಿ ಮತ್ತು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಸಾರ್ವಜನಿಕರಿಂದ 17,723 ಮನವಿಗಳನ್ನು ಸ್ವೀಕರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ಹಲವು ಜಿಲ್ಲಾಧಿಕಾರಿಗಳು ಕ್ರಮ ವಹಿಸಿದ್ದಾರೆ.
76. ಸ್ವೀಕರಿಸಿದ ಮನವಿಗಳಲ್ಲಿ ಶೇ. 50 ರಷ್ಟು ಇತ್ಯರ್ಥಪಡಿಸಲಾಗಿದೆ.
77. ಬೆಂಗಳೂರಿನಲ್ಲಿ ಸೆಪ್ಟೆಂಬರ್ ಕೊನೆಯ ವಾರ ಉದ್ಯೋಗ ಮೇಳ ಯಶಸ್ವಿಯಾಗಿ ಏರ್ಪಡಿಸಲಾಯಿತು.
78. ಎಲ್ಲ ಜಿಲ್ಲೆಗಳಲ್ಲೂ ಉದ್ಯೋಗ ಮೇಳ ಏರ್ಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
79. ಈ ವರೆಗೆ 10ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿದ್ದು, 7 ಜಿಲ್ಲಾಡಳಿತಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಾಗುವುದು.
ಕಾವೇರಿ ಆನ್‍ಲೈನ್ ಸೇವೆಗಳು: ನಾಗರಿಕ ಸ್ನೇಹಿ ಉಪಕ್ರಮ
80. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿವಿಧ ಸೇವೆಗಳನ್ನು ಆನ್‍ಲೈನ್‍ನಲ್ಲಿ ಒದಗಿಸಲಾಗುತ್ತಿದ್ದು, ಇದಕ್ಕೆ ನವೆಂಬರ್ 16 ರಂದು ಚಾಲನೆ ನೀಡಲಾಗಿದೆ.
81. ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ / ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಸುವಿಕೆ, ನೋಂದಣಿಗೆ Appointment Booking ಸೇರಿದಂತೆ ಇನ್ನಿತರ ಸೇವೆಗಳನ್ನು ಆನ್ಲೈನ್ ಮೂಲಕ ಲಭ್ಯವಾಗಲಿವೆ.
82. ಸಾರ್ವಜನಿಕರು ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ, ಮೌಲ್ಯ ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
83. ಸಾರ್ವಜನಿಕರು ತಾವು ಮಾಡಿಕೊಳ್ಳುವ ಕರಾರು ಪತ್ರ ಮತ್ತು ಪ್ರಮಾಣ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಆನ್ಲೈನ್ for ಮೂಲಕ ಪಾವತಿಸಿ, ಇ-ಸ್ಟಾಂಪ್ ಕಾಗದವನ್ನು ತಮ್ಮ ಮನೆಯಲ್ಲಿ ಕುಳಿತೇ ಪಡೆಯಬಹುದಾಗಿದೆ.

JDS-Congress,Alliance government, 175-day administration

500 Internal Server Error

Internal Server Error

The server encountered an internal error or misconfiguration and was unable to complete your request.

Please contact the server administrator, webmaster@push.vartamitra.com and inform them of the time the error occurred, and anything you might have done that may have caused the error.

More information about this error may be available in the server error log.

Additionally, a 500 Internal Server Error error was encountered while trying to use an ErrorDocument to handle the request.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ