ಅತ್ಯಾಚಾರದಂತ ಸಮಸ್ಯೆಗಳ ಪರಿಹರಾಕ್ಕೆ ಚರ್ಚೆ ನಡೆಸೆಬೇಕೆ ಹೊರತು ಯಾವ ಸರ್ಕಾರದ ಅವಧಿಯಲ್ಲಿ ಎಷ್ಟು ಇಂತ ಪ್ರಕರಣ ನಡೆಯಿತೆಂಬುದನ್ನ ಚರ್ಚಿಸುವುದಲ್ಲ: ಪ್ರಧಾನಿ ಮೋದಿ

ಲಂಡನ್:ಏ-19: ಅತ್ಯಾಚಾರದಂತಹ ಪ್ರಕರಣಗಳನ್ನು ಯಾವಾಗಲೂ ಖಂಡಿಸಬೇಕು. ನಿಜಕ್ಕೂ ಇದು ಕಳವಳಕಾರಿ ವಿಚಾರವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ನಡೆಯಿತು, ಇತರರ ಅಧಿಕಾರದ ಅವಧಿಯಲ್ಲಿ ಎಷ್ಟು ಪ್ರಕರಣ ನಡೆಯಿತು ಎಂಬುದರ ಕುರಿತು ಚರ್ಚೆ ಅನಗತ್ಯ. ನಮ್ಮ ಚರ್ಚೆ ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕೇ ಹೊರತು, ಒಬ್ಬರ ಮೇಲೊಬ್ಬರು ಆರೋಪ ಹೊರಿಸಿ ರಾಜಕೀಯ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಲಂಡನ್ ನಲ್ಲಿ ನಡೆದ ‘ಭಾರತ್ ಕಿ ಬಾತ್ ಸಬ್ ಕೇ ಸಾಥ್’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಮಹಿಳೆಯರ ಸುರಕ್ಷತೆ ಕುರಿತಂತೆ ಮಾತನಾಡಿದರು. ಈ ವೇಳೆ ಪ್ರೇಕ್ಷಕರೊಬ್ಬರು ಕೇಳಿದ ಮಹಿಳಾ ಸುರಕ್ಷತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ,

ಅತ್ಯಾಚಾರ ಎಂದರೆ ಅತ್ಯಾಚಾರ ಅಷ್ಟೇ. ಈ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳು ನಡೆದವು.ಹಿಂದಿನ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳು ನಡೆಯಿತು ಎಂಬುದರ ಬಗ್ಗೆ ಹೋಲಿಕೆ ಮಾಡಲು ನಾನು ಇಚ್ಛಿಸುವುದಿಲ್ಲ. ಅತ್ಯಾಚಾರ ಅತಿ ದುಃಖದ ಸಂಗತಿ. ಅತ್ಯಾಚಾರವನ್ನು ರಾಜಕೀಯ ವಿಷಯವನ್ನಾಗಿ ಮಾಡಬಾರದು ಎಂದಿದ್ದಾರೆ.

ನನ್ನ ಸ್ವತಂತ್ರ್ಯ ದಿನಾಚರಣೆಯ ಕೆಂಪುಕೋಟೆ ಭಾಷಣದ ವೇಳೆ ನಾನು ಈ ಬಗ್ಗೆ ಮಾತನಾಡಿದ್ದೆ. ಹೆಣ್ಣು ಮಕ್ಕಳ ಮಾತ್ರವಲ್ಲ, ಮನೆಗೆ ಬರುವ ಗಂಡುಮಕ್ಕಳನ್ನು ಏಕೆ ಪೋಷಕರು ಪ್ರಶ್ನೆ ಮಾಡುವುದಿಲ್ಲ. ಮನೆಗೆ ವಾಪಸ್ ಆಗುವ ಗಂಡುಮಕ್ಕಳು ಎಲ್ಲಿಗೆ ಹೋಗಿದ್ದರು ಎಂಬುದನ್ನು ಪೋಷಕರು ಪ್ರಶ್ನಿಸಬೇಕು ಎಂದು ಹೇಳಿದ್ದೆ ಎಂದು ಮೋದಿ ಹೇಳಿದರು.

ಇದೇ ವೇಳೆ ಕೇಂದ್ರ ಸರ್ಕಾರದ ಬಯಲು ಶೌಚಮುಕ್ತ ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಧಾನಿ ಮೋದಿ ಈಗ ದೇಶದ ಸುಮಾರು 3 ಲಕ್ಷ ಮನೆಗಳು ಬಯಲು ಶೌಚ ಮುಕ್ತವಾಗಿವೆ ಎಂದು ಮಾಹಿತಿ ನೀಡಿದರು.
PM Modi,London, Women Safety

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ