ನವದೆಹಲಿ: ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿ, ಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಿಲ್ಲ. ಒಟ್ಟಾರೆ ವ್ಯವಹಾರಗಳನ್ನು ನಿಯಮದಡಿಯಲ್ಲಿಯೇ ಮಾಡಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಡಿಸಿದೆ.
ರಫೇಲ್ ಡೀಲ್ ಖರೀದಿ ಅವ್ಯವಹಾರ ಕುರಿತು ತನಿಖೆ ಆಗಬೇಕೆಂದು ಕೋರಿ ಸಲ್ಲಿಸಲಾಗಿದ್ದ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ. ಪ್ರಕರಣದ ತನಿಖೆ ಅಗತ್ಯವಿಲ್ಲ. ಈ ಡೀಲ್ನಲ್ಲಿ ಯಾವುದೇ ರೀತಿಯ ಅವ್ಯವಹಾರ ಇದೆ ಎನ್ನುವ ಶಂಕೆ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ರಫೇಲ್ ಯುದ್ಧ ವಿಮಾನದ ಗುಣಮಟ್ಟದಲ್ಲಿ, ಮೌಲ್ಯದಲ್ಲಿ ಯಾವುದೇ ಲೋಪ ಇಲ್ಲ. ರಫೇಲ್ ಯುದ್ಧ ವಿಮಾನ ನಮ್ಮ ಅಗತ್ಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ವಕೀಲರಾದ ಪ್ರಶಾಂತ್ ಭೂಷಣ್, ಎಂ.ಎಲ್. ಶರ್ಮಾ ಹಾಗೂ ಆಪ್ ನಾಯಕ ಸಂಜಯ್ ಸಿಂಗ್ ಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ನವೆಂಬರ್ 14ರಂದು ತೀರ್ಪು ಕಾಯ್ದಿರಿಸಿತ್ತು.
Rafale Deal, There is “no reason for intervention,Supreme Court