ಯಾವ ಮಾನದಂಡದ ಮೇಲೆ ‘ಸುಪ್ರೀಂ’ ನಮ್ಮ ಶಿಫಾರಸುಗಳಲ್ಲಿ ಬದಲಾವಣೆ ಮಾಡಿತು: ಜಸ್ಟಿಸ್ ಲೋಧಾ ಪ್ರಶ್ನೆ

ನವದೆಹಲಿ: ಬಿಸಿಸಿಐ ಕಾರ್ಯ ನಿರ್ವಹಣೆ ಮತ್ತು ಮೇಲ್ವಿಚಾರಣೆ ಕುರಿತಂತೆ ತಾನು ಮಾಡಿದ್ದ ಶಿಫಾರಸ್ಸುಗಳನ್ನು ಸುಪ್ರೀಂ ಕೋರ್ಟ್ ಯಾವ ಮಾನದಂಡಗಳ ಆಧಾರದ ಮೇಲೆ ಪರಿಷ್ಕರಣೆಗೆ ಆದೇಶ ನೀಡಿತು ಎಂದು ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಧ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಆರ್ ಎಂ ಲೋಧಾ ಪ್ರಶ್ನಿಸಿದ್ದಾರೆ.
ನಿನ್ನೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ನಿಜಕ್ಕೂ ಸುಪ್ರೀಂ ಕೋರ್ಟ್ ಆದೇಶ ನನಗೆ ಅಚ್ಚರಿ ತಂದಿದೆ. 2016ರಲ್ಲಿ ಲೋಧ ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು ಎಂದು ಹೇಳಿದ್ದ ಇದೇ ಸುಪ್ರೀಂ ಕೋರ್ಟ್ ಇದೀಗ ಅದಾವ ಕಾರಣಕ್ಕಾಗಿ ಶಿಫಾರಸ್ಸುಗಳ ಪರಿಷ್ಕರಣೆಗೆ ಅನುಮತಿ ನೀಡಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.
‘ನಿಜಕ್ಕೂ ನನಗೆ ಅಚ್ಚರಿಯಾಗಿದೆ. 2016ರಲ್ಲಿ ಲೋಧಾ ಸಮಿತಿ ಶಿಫಾರಸ್ಸುಗಳನ್ನು ಚಾಚೂ ತಪ್ಪದೇ ಜಾರಿಗೊಳಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಆದರೆ ಇದೀಗ ಆ ಶಿಫಾರಸ್ಸುಗಳ ಪೈಕಿ ಕೆಲವುಗಳ ಪರಿಷ್ಕರಣೆಗೆ ಅನುಮತಿ ನೀಡಿದೆ. ನಾವು ಯಾವುದೇ ಕ್ರಿಕೆಟ್ ಮಂಡಳಿಗಳ ಹಕ್ಕನ್ನು ಕಸಿದುಕೊಳ್ಳಲು ಶಿಫಾರಸ್ಸು ಮಾಡಿಲ್ಲ. ಅಂತೆಯೇ ಸರ್ಕಾರಕ್ಕೂ ಕ್ರಿಕೆಟ್ ಮಂಡಳಿಯ ವ್ಯವಹಾರಕ್ಕೂ ಸಂಬಂಧವಿಲ್ಲ. ಬಿಸಿಸಿಐ ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಸ್ವಾಯತ್ತತ್ತೆಯ ರಕ್ಷಣೆ ಕೂಡ ಮುಖ್ಯ. ಆದರೆ ಕ್ರಿಕೆಟ್ ಅಭಿವೃದ್ಧಿ ಮತ್ತು ಕ್ರಿಕೆಟ್ ನಲ್ಲಿನ ಅಪರಾಧಗಳ ನಿಯಂತ್ರಣಕ್ಕಾಗಿ ಕೆಲ ಶಿಫಾರಸ್ಸು ಮಾಡಿದ್ದೆವು. ಅದೇ ಶಿಫಾರಸ್ಸು ಜಾರಿಗೆ ಕೋರ್ಟ್ ಆದೇಶ ನೀಡಿತ್ತು. ಆದರೀಗ ಇವುಗಳ ಪೈಕಿ ಕೆಲ ಶಿಫಾರಸ್ಸುಗಳ ಪರಿಷ್ಕರಣೆಗೆ ಆದೇಶ ನೀಡಲಾಗಿದೆ ಎಂದು ಲೋಧಾ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ನಿನ್ನೆ ನಡೆದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ‘ಒಂದು ರಾಜ್ಯ, ಒಂದು ಮತ’ ಪದ್ಧತಿಯನ್ನು ಜಾರಿಗೆ ತರುವಂತೆ ಸೂಚಿಸಿತ್ತು, ಮುಂಬೈ, ಸೌರಾಷ್ಟ್ರ, ವಡೋದರಾ ಮತ್ತು ವಿದರ್ಭ ಕ್ರಿಕೆಟ್ ಸಂಸ್ಥೆಗಳಿಗೆ ಶಾಶ್ವತ ಸದಸ್ಯತ್ವ ನೀಡಿರುವ ನ್ಯಾಯಪೀಠ ರೈಲ್ವೆ, ಸರ್ವಿಸಸ್ ಮತ್ತು ವಿಶ್ವವಿದ್ಯಾಲಯಗಳ ಕ್ರಿಕೆಟ್ ಸಂಸ್ಥೆಗಳಿಗೂ ಶಾಶ್ವತ ಮಾನ್ಯತೆ ನೀಡಿತ್ತು. ಬಿಸಿಸಿಐ ಸಿದ್ಧಪಡಿಸಿರುವ ಹೊಸ ನಿಯಮಾವಳಿಗಳ ಕರಡನ್ನು ಕೆಲವು ಬದಲಾವಣೆಗಳೊಂದಿಗೆ ಜಾರಿಗೆ ತರುವಂತೆಯೂ ನ್ಯಾಯಪೀಠ ಹೇಳಿದ್ದು ಎಲ್ಲ ಕ್ರಿಕೆಟ್ ಸಂಸ್ಥೆಗಳು 30 ದಿನಗಳ ಒಳಗೆ ಈ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಬೇಕು ಎಂದಿದೆ. ಅನುಮೋದನೆ ಪಡೆದಿರುವ ಬಿಸಿಸಿಐ ನಿಯಮಾವಳಿಗಳನ್ನು ದಾಖಲೆ ಸಮೇತ ನಾಲ್ಕು ವಾರಗಳ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ತಮಿಳುನಾಡು ಮುಖ್ಯ ನೋಂದಣಾಧಿಕಾರಿಗೆ ಸೂಚಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ