ನಾಳೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ

ನವದೆಹಲಿ: ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

ಛತ್ತೀಸ್‍ಗಢ, ಮಧ್ಯಪ್ರದೇಶ, ಮಿಜೋರಾಂ, ತೆಲಂಗಾಣ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ವಿವಿಧ ಹಂತದಲ್ಲಿ ನಡೆದ ಫಲಿತಾಂಶ ನಾಳೆ ಮಧ್ಯಾಹ್ನದ ಒಳಗೆ ಹೊರಬೀಳಲಿದ್ದು, ರಾಷ್ಟ್ರೀಯ ಮತ್ತು ಪ್ರಮುಖ ರಾಜಕೀಯ ಪಕ್ಷಗಳ ಘಟಾನುಘಟಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‍ಗಢ, ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‍ಎಸ್) ಅಧಿಕಾರ ನಡೆಸಿದ ತೆಲಂಗಾಣ ಹಾಗೂ ಕಾಂಗ್ರೆಸ್ ಹಿಡಿತದಲ್ಲಿರುವ ಮಿಜೋರಾಂನಲ್ಲಿ ನಾಳೆ ಬೆಳಗ್ಗೆ 8ರಿಂದ ಏಕಕಾಲದಲ್ಲಿ ಮತ ಎಣಿಕೆ ಆರಂಭವಾಗಲಿದೆ. ನಾಳೆ ಬೆಳಗ್ಗೆ 11 ಗಂಟೆ ಒಳಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭಿಸಲಿದೆ.

ಫಲಿತಾಂಶ ಪೂರ್ವ ಸಮೀಕ್ಷೆಗಳ ಪ್ರಕಾರ, ಈ ಬಾರಿ ಬಿಜೆಪಿ ಪ್ರಾಬಲ್ಯವಿರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯಗಳು ಕೇಸರಿ ಪಕ್ಷಕ್ಕೆ ಕಠಿಣ ಹಾದಿಯಾಗಿದೆ. ಈ ಮೂರು ರಾಜ್ಯಗಳಲ್ಲೂ ಕಾಂಗ್ರೆಸ್ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದು, ಸಮಬಲದ ಪೈಪೋಟಿ ಇದೆ. ಇನ್ನೂ ಕೆಲವು ಸಮೀಕ್ಷೆಗಳ ಪ್ರಕಾರ ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.

ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‍ಎಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸ್ಪಷ್ಟ ಸೂಚನೆಗಳಿದ್ದು, ಮಿಜೋರಾಂನಲ್ಲಿ ಮತ್ತೆ ಕಾಂಗ್ರೆಸ್‍ಗೆ ಅಧಿಕಾರ ಒಲಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಒಟ್ಟಾರೆ ಈ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ.

five state-assembly-elections result

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ