ನವದೆಹಲಿ: ನೌಕಾಪಡೆ ದಿನಾಚರಣೆ ಹಿನ್ನಲೆಯಲ್ಲಿ ದೇಶದ ಜನತೆ ಸಾಗರದ ಯೋಧರಿಗೆ ನಮನ ಸಲ್ಲಿಸಿದ್ದಾರೆ.
1971ರ ಡಿ. 4ರಂದು ಕರಾಚಿಯ ಪಾಕ್ ನೌಕಾನೆಲೆಯ ಮೇಲೆ ದಾಳಿ ನಡೆಸಿ, ವಿಜಯ ಸಾಧಿಸಿದ ದಿನವನ್ನು ನೌಕಾದಿನವನ್ನಾಗಿ ಆಚರಿಸಲಾಗುತ್ತದೆ.
ಆಪರೇಶನ್ ಟ್ರಿಡೆಂಟ್ ಹೆಸರಿನಲ್ಲಿ ಕರಾಚಿಯ ಬಂದರಿನಲ್ಲಿದ್ದ ಶತ್ರುರಾಷ್ಟ್ರದ ಯುದ್ಧನೌಕೆಗಳ ಮೇಲೆ ಭಾರತದ ಯುದ್ಧನೌಕೆಗಳು ಆರು ಕ್ಷಿಪಣಿ ದಾಳಿ ನಡೆಸಿ 4 ಯುದ್ಧನೌಕೆಗಳು ಮತ್ತು ಒಂದು ಕಾರ್ಗೋ ಹಡಗನ್ನು ಧ್ವಂಸಗೊಳಿಸಿದ್ದವು. ಈ ಕಾರ್ಯಾಚರಣೆಯಲ್ಲಿ ಪಾಕ್ ನೌಕಾಪಡೆಯ ಯೋಧರ ಸಹಿತ ಸುಮಾರು 500 ಜನರು ಸಾವನ್ನಪ್ಪಿದ್ದರು. ಕಾರ್ಯಾಚರಣೆಯ ಬಳಿಕ ಡಿ. 3 ಅನ್ನು ನೌಕಾಪಡೆಯು ಕಿಲ್ಲರ್ ಡೇ ಎಂದು ಆಚರಿಸುತ್ತದೆ.
ನೌಕಾಪಡೆ ದಿವಸ್ ಆಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಾಗರದ ವೀರರಿಗೆ ಶುಭಕೋರಿದ್ದಾರೆ. ನೌಕಾಪಡೆಯ ಎಲ್ಲ ಯೋಧರು ಮತ್ತವರ ಕುಟುಂಬಕ್ಕೆ ನೇವಿ ದಿವಸದ ಶುಭಾಶಯಗಳು. ದೇಶವನ್ನು ರಕ್ಷಿಸುತ್ತಿರುವ ಮತ್ತು ಸಂಕಷ್ಟದ ಸಂದರ್ಭದಲ್ಲಿ ಸದಾ ಸನ್ನದ್ಧವಾಗಿರುವ ನಿಮ್ಮ ಸೇವೆಗೆ ಭಾರತ ಧನ್ಯವಾದ ಅರ್ಪಿಸುತ್ತದೆ ಎಂದಿದ್ದಾರೆ.
ನೌಕಾಪಡೆ ದಿನಾಚರಣೆಯ ಸಂದರ್ಭದಲ್ಲಿ ಹೇಳಿಕೆ ನೀಡಿರುವ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ, ನೇವಿಯು ದೇಶದ ಜಲಪರಿಧಿಯನ್ನು ಸದಾ ರಕ್ಷಿಸಲು ಸನ್ನದ್ಧವಾಗಿದೆ. ನೌಕಾಪಡೆಯ ಯೋಧರು ಸಾಗರವನ್ನು ಕಾಯುತ್ತಿದ್ದಾರೆ ಎಂದಿದ್ದಾರೆ.
Navy Day, PM Modi, Other Leaders Salute “Guardians Of The Sea”