
ನವದೆಹಲಿ: ಮೇಕೆದಾಟು ಯೋಜನೆ ವಿಚಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ(ಸಿಡಬ್ಲ್ಯುಎಂಎ)ಸಭೆಯಲ್ಲಿ ಪ್ರತಿಧ್ವನಿಸಿದ್ದು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ವಾದ-ಪ್ರತಿವಾದ ಮತ್ತು ಮಾತಿನ ಚಕಮಕಿಗೆ ಕಾರಣವಾಯಿತು.
ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿರುವುದನ್ನು ಪ್ರತಿಭಟಿಸಿ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಇಂದಿನ ಸಿಡಬ್ಲ್ಯುಎಂಸಿ ಸಭೆಯಲ್ಲೂ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿತು. ಆದರೆ ಇದಕ್ಕೆ ಕರ್ನಾಟಕ ಪ್ರತಿವಾದದ ಮೂಲಕ ಸಮರ್ಥನೆ ನೀಡಿದಾಗ ಕೆಲಕಾಲ ಮಾತಿನ ಚಕಮಕಿಗೆ ಕಾರಣವಾಯಿತು.
ದೆಹಲಿಯ ಸೇವಾಭವನದಲ್ಲಿ ಇಂದು ನಡೆದ ಪ್ರಾಧಿಕಾರದ ಎರಡನೇ ಸಾಮಾನ್ಯ ಸಭೆ ನಡೆಯಿತು. ಕೇಂದ್ರ ಜಲ ಆಯೋಗದ ಅಧ್ಯಕ್ಷರೂ ಆಗಿರುವ ಸಿಡಬ್ಲ್ಯುಎಂಎ ಅಧ್ಯಕ್ಷ ಮಸೂದ್ ಹುಸೇನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳ ಉನ್ನತಾಧಿಕಾರಿಗಳು ಮತ್ತು ಜಲ ಸಂಪನ್ಮೂಲ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.ಇದೇ ವೇಳೆ ಕೇಂದ್ರ ಜಲ ಆಯೋಗವು ಕರ್ನಾಟಕದ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿರುವ ಕ್ರಮದ ಬಗ್ಗೆ ಚಕಾರ ಎತ್ತಿದ ತಮಿಳುನಾಡು, ಈ ಸಮ್ಮತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿತು. ಇದಕ್ಕೆ ಕರ್ನಾಟಕದ ಉನ್ನತಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಜಲ ಆಯೋಗದ ಕ್ರಮವನ್ನು ಸಮರ್ಥಿಸಿಕೊಂಡಾಗ ಕೆಲಕಾಲ ವಾದ-ವಿವಾದ ಮತ್ತು ಮಾತಿನ ಚಕಮಕಿ ನಡೆಯಿತು.
ಮಧ್ಯಪ್ರದೇಶಿಸಿದ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್, ಈ ಸಭೆಯಲ್ಲಿ ಇತರ ಪ್ರಮುಖ ವಿಷಯಗಳೂ ಸಹ ಇವೆ ಅವುಗಳ ಬಗ್ಗೆ ಚರ್ಚೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು. ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಒಳಹರಿವು ಮತ್ತು ಹೊರ ಹರಿವು ವಿವರಗಳ ಬಗ್ಗೆ ಅಧ್ಯಕ್ಷರು ನಾಲ್ಕು ರಾಜ್ಯಗಳಿಂದ ಮಾಹಿತಿ ಪಡೆದದು. ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಕಾವೇರಿ ನದಿ ನೀರು ವಿವಾದ ಮಂಡಳಿಯ ಆದೇಶಗಳ ಪಾಲನೆ ಸೇರಿ ಕೆಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
cauvery-water-management, meeting,karnataka,tamil nadu