ಬೆಂಗಳೂರು: ರಾಮ ಮಂದಿರ ನಿರ್ಮಾಣ ಕಾರ್ಯವಾಗದೆ ನಮಗೆ ವಿಶ್ರಾಂತಿಯಿಲ್ಲ.ಹನುಮ ಜನಿಸಿದ ನಾಡು ಕರ್ನಾಟಕವಾದ್ದರಿಂದ, ಎಲ್ಲಾ ಕನ್ನಡಿಗರು ರಾಮ ಮಂದಿರ ನಿರ್ಮಾಣಕ್ಕೆ ಹೋರಾಟ ನಡೆಸಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕರೆ ನೀಡಿದರು.
ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಏರ್ಪಡಿಸಿದ್ದ ಜನಾಗ್ರಹ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೀತಾನ್ವೇಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸಿದಂತೆ ಈಗ, ರಾಮ ಜನ್ಮಭೂಮಿ ಅಪಹರಣವಾಗಿದೆ, ಇದನ್ನು ಮರುಪಡೆಯಲು ಹನುಮಂತನಂತೆ ಕಾರ್ಯಕೈಗೊಳ್ಳಬೇಕು. ಹನುಮನ ಜನ್ಮಸ್ಥಳ ಕರ್ನಾಟಕವಾದ್ದರಿಂದ ಎಲ್ಲಾ ಕನ್ನಡಿಗರು ರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು.
ರಾಮನ ಪಾದಸ್ಪರ್ಶದಿಂದ ಅಹಲ್ಯೆ ಶಾಪವಿಮೋಚನೆಯಾದಂತೆ ಭಾರತೀಯರಿಗೂ ಶಾಪವಿಮೋಚನೆಯಾಗಿ ಇದೀಗ ಚೈತನ್ಯ ಬಂದಿದೆ. ನ್ಯಾಯಾಲಯಕ್ಕೆ ಅರ್ಹತೆ ತಿಳಿಯುತ್ತಿಲ್ಲ. ರಾಮಜನ್ಮಭೂಮಿಗಿಂತ ಬೇರೆ ವಿಷಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಭಗವಂತ ರಾಮನಿಗೆ ಮಾಡಿದ ಅವಮಾನ ಹಾಗೇಯೇ ಇಡೀ ಹಿಂದೂ ಸಮಾಜಕ್ಕೆ ತೋರಿದ ಅಗೌರವ. ರಾಮಜನ್ಮಭೂಮಿಗೆ ಆದ್ಯತೆ ಇಲ್ಲ ಎಂದು ಕೋರ್ಟ್ ಹೇಳಿದಾಗ ನನಗೆ ತುಂಬಾ ಬೇಸರವಾಯಿತು. ಕೋಟಿ ಜನತೆ ಅನೇಕ ವರ್ಷಗಳಿಂದ ರಾಮಮಂದಿರದ ನಿರೀಕ್ಷಣೆಯಲ್ಲದೆ. ಹಾಗೇಯೇ ಹೋರಾಟವೂ ನಡೆಸುತ್ತಿದೆ. ಇಂತಹ ವಿಷಯಕ್ಕೆ ನ್ಯಾಯಾಲಯದಲ್ಲಿ ಆದ್ಯತೆ ಇಲ್ಲ. ನ್ಯಾಯಾಲಯದಲ್ಲಿ ಪೂರ್ಣ ಪರಿವರ್ತನೆ ಆಗಬೇಕಿದೆ. 20 ವರ್ಷಗಳಾದರೂ ನ್ಯಾಯ ಸಿಗುವುದಿಲ್ಲ. ಸಕಾಲದಲ್ಲಿ ನ್ಯಾಯ ದೊರೆಯದಿದ್ದರೆ ಅದು ನ್ಯಾಯ ಎನಿಸಿಕೊಳ್ಳುವುದಿಲ್ಲ. ನ್ಯಾಯದಾನದಲ್ಲಿ ವಿಳಂಬ ಸಲ್ಲದು. ತ್ವರಿತ ಗತಿಯಲ್ಲಿ ಕಾರ್ಯ ನಡೆಯಬೇಕಿದೆ. ಶ್ರೀರಾಮ ನಮ್ಮ ರಾಷ್ಟ್ರದ ದೇವತೆ, ಅವನ ಮಂದಿರದ ನಿರ್ಮಾಣ ನಮ್ಮ ಗೌರವ ಸ್ವಾಭಿಮಾನಗಳ ಪ್ರಶ್ನೆಯಾಗಿದೆ ಎಂದರು.
ಎಲ್ಲಾ ಸಾಧು ಸಂತರು ಗೇರುಹಣ್ಣಿನ ಬೀಜದಂತೆ. ಯಾವುದೇ ಪಕ್ಷದ ಪರವಾಗಿಲ್ಲ. ಸಂತರು, ಮಠಾಪತಿಗಳು ರಾಜಕೀಯದಿಂದ ಹೊರಗಿದ್ದಾರೆ. ನಾವು ರಾಷ್ಟ್ರದ ಪರವಾಗಿ ಮಾತನಾಡುತ್ತಿದ್ದೇವೆ. ರಾಮಮಂದಿರ ನಿರ್ಮಾಣ ರಾಷ್ಟ್ರೀಯ ಸಾಧನೆ. ರಾಮ ಭಾರತದ ಮಹಾಪುರುಷ ಇದರಿಂದ ಅವನ ಭಕ್ತರಲ್ಲದವರೂ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಬೇಕು ಎಂದು ತಿಳಿಸಿದರು.
ಮುಸಲ್ಮಾನರಿಗೆ ಇದು ದೊಡ್ಡ ಅವಕಾಶ. ನಮಾಜಿಗೆ ಮಸೀದಿಯ ಅಗತ್ಯವಿಲ್ಲ ಎಂಬ ನ್ಯಾಯಲಯದ ಅಭಿಪ್ರಾಯದೇ ಹಿನ್ನಲೆಯಲ್ಲೇ ಮುಸಲ್ಮಾನರು ರಾಮ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಒಂದು ವೇಳೆ ಹೀಗೆ ನಡೆದರೆ ರಾಷ್ಟ್ರದ ಹಿಂದೂ ಮುಸ್ಲಿಂರಲ್ಲಿ ಸೌಹಾರ್ದತೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಮ ಕಾರ್ಯವಾಗದೆ ನಮಗೆ ವಿಶ್ರಾಂತಿಯಿಲ್ಲ, ಹೋರಾಟಕ್ಕೆ ವಿರಾಮವೂ ಇಲ್ಲ. ಶೀಘ್ರದಲ್ಲೇ ಸಂತರೆಲ್ಲ ಆಯೋಗ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಯೋಜನೆಯಿದೆ.ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯೆರನ್ನು ಒಂದೆಡೆ ಸೇರಿಸಿ ಸಭೆ ಕರೆಯಬೇಕಿದೆ. ಒಂದು ವೇಳೆ ಕ್ರಿಯೆಗಳು ನಡೆಯದಿದ್ದರೆ ಸಂತರೆಲ್ಲ ಉಪವಾಸ ಕೈಗೊಳ್ಳುವ ದಿಟ್ಟ ಹೆಜ್ಜೆ ಇಡಲು ಸಿದ್ಧರಾಗಬೇಕು. ನಾವು ಕೋಮುವಾದಿಗಳಲ್ಲ ಪ್ರೇಮವಾದಿಗಳು ಹಾಗೆಯೇ ಪ್ರೇಮವಾದಿಗಳೆಲ್ಲ ರಾಮವಾದಿಗಳು ಎಂದರು.
ಆರ್ಎಸ್ಎಸ್ ಸಹ ಸರಕಾರ್ಯವಾಹ ಮುಕುಂದಜಿ ಸಿ.ಆರ್ ಮಾತನಾಡಿ, ಇಂದು ರಾಮ ಕಟಕಟೆಯಲ್ಲಿ ತನ್ನ ಹಕ್ಕುಪತ್ರಕ್ಕಾಗಿ ನಿಂತಿದ್ದಾನೆ. ಆದರೆ ಹಿಂದೂ ಸಮಾಜದ ವಿಷಯ ಕೋರ್ಟಿಗೆ ಆದ್ಯತೆಯೇ ಆಗಿಲ್ಲ. ಚಪ್ಪಲಿಯನ್ನು ಸ್ಲಿಪ್ಪರ್ ಅನ್ನಬೇಕೋ ಅಥವಾ ಸ್ಯಾಂಡಲ್ ಅನ್ನಬೇಕೋ ಎಂದು ತೀರ್ಮಾನಿಸುವುದು ರಾಮಜನ್ಮಭೂಮಿಗಿಂತ ಆದ್ಯತೆಯ ವಿಷಯ ನ್ಯಾಯಾಲಯಕ್ಕಾಗಿದೆ. ಈ ಕುರಿತು 1949ರಿಂದಲೇ ಮೋಕದ್ದಮೆ ಪ್ರಾರಂಭವಾಗಿದೆ. ಇದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳಿಗೆ ಆದ್ಯತೆಯ ವಿಷಯವಾಗಲಿಲ್ಲ.ಅಯೋಧ್ಯೆಯ ಶ್ರೀರಾಮಚಂದ್ರನ ಕಥೆ ಸಮಾಜದಲ್ಲಿ ಜನಜನಿತವಾದ ಕತೆ. ಆದರೆ ಇಂದು ನ್ಯಾಯಾಲಯದಲ್ಲಿ ನಿದ್ರಾದೇವಿ ಆವರಿಸಿದ್ದಾಳೆ. ಕಾನೂನು ಪಾಲನೆ, ನ್ಯಾಯಕ್ಕೆ ಬೆಲೆ ಕೊಡುವುದರಲ್ಲಿ ಹಿಂದೂ ಸಮಾಜ ಅಗ್ರಸ್ಥಾನದಲ್ಲಿದೆ. ಆದರೆ ಕೋರ್ಟ್ ಹಿಂದೂ ಸಮಾಜಕ್ಕೆ ಆದ್ಯತೆ ನೀಡಿಲ್ಲ ಇದು ನಮ್ಮ ದುರ್ದೈವ. ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಶಬರಿಮಲೆ ವಿಚಾರವನ್ನು ವಿರೋಸಿ ಕೋರ್ಟ್ ತೀರ್ಪು ನೀಡಿದೆ. ಇದನ್ನು ಪಾಲಿಸಲು ಕೇರಳದ ಕಮ್ಯುನಿಷ್ಟ್ ಸರ್ಕಾರ ಪಾಲಿಸಲು ಮುಂದಾಗಿದೆ. ರಾಮನ ಹಕ್ಕುಪತ್ರ ನೀಡದಿರುವುದು ಕೋಟ್ಯಂತರ ಹಿಂದೂಗಳ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಈ ಕಾರಣದಿಂದಲೇ ಜನಾಗ್ರಹ ಸಭೆ ಸೇರಲಾಗಿದೆ. ದೇಶದ ರಾಜ್ಯಸಭಾ ಸದಸ್ಯರು ಈ ಕುರಿತು ತೀರ್ಮಾನ ನೀಡಬಾರದೆಂದು ನ್ಯಾಯಾಲಯಕ್ಕೆ ಹೋಗುತ್ತಾರೆ. ಸೀತೆಯನ್ನು ಹುಡುಕಿಕೊಂಡು ರಾಮಲಕ್ಷ್ಮಣರು ದಕ್ಷಿಣಕ್ಕೆ ಬಂದಾಗ ಸುಗ್ರೀವ ವಾನರರ ಸೇನೆ ಕಳಿಸಿ ಸುಗ್ರೀವಾಜ್ಞೆ ಹೊರಡಿಸಿದ್ದ. ಅದೇ ರೀತಿ ನಾವು ವಾನರರು ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕಿದೆ. ಅಂದು ಸೀತಾನ್ವೇಷಣೆಗೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಆದರೆ ಇಂದು ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಬೇಕಿದೆ.
ಅನೇಕರು ಚುನಾವಣಾ ಸಮಯವೆಂದು ರಾಮ ಮಂದಿರ ವಿಷಯ ಕೈಗೆತ್ತಿಕೊಂಡಿದ್ದೀರಾ? ಎಂದು ಪ್ರಶ್ನಿಸುತ್ತಾರೆ. ರಾಮ ಮಂದಿರದ ವಿಷಯ ಸ್ಥಿರವಾಗಿ ನಿಂತಿದೆ. ಚುನಾವಣೆಗಳು ರಸ್ತೆಗಳಲ್ಲಿನ ವೃತ್ತದಂತೆ. ರಾಮ ಮಂದಿರ ಜಾತಿ, ಮತ, ಪ್ರಾಂತ್ಯಗಳ ಭೇದಗಳನ್ನು ದೂರಗೊಳಿಸಿ, ಸದೃಢ ಭಾರತ ನಿರ್ಮಿಸುವ ಅಡಿಗಲ್ಲು ಈ ಮಂದಿರ ನಿರ್ಮಾಣ. ಇದೊಂದು ಸುಂದರವಾದ ದೊಡ್ಡ ಕಲ್ಪನೆ. ಇದು ಕೇವಲ ದೇವಾಲಯ ಕಟ್ಟುವ ಉದ್ದೇಶವಲ್ಲ. ಇಲ್ಲಿ ರಾಷ್ಟ್ರೀಯತೆಯತೆ ಇದೆ. ರಾಷ್ಟ್ರಸಂಘಟನೆಯ ಯೋಜನೆಯಿದೆ. ಯಾವುದೇ ಸರ್ಕಾರವಾಗಲೀ ಕೋರ್ಟ್ ಆಗಲಿ ಹಿಂದೂ ಸಮಾಜದ ಭಾವನೆಗಳಿಗೆ ಬೆಲೆ ಕೊಡಬೇಕು. ರಾಮ ಹುಟ್ಟಿದ ಜಾಗದಲ್ಲೇ ಅವನ ಭವ್ಯ ಮಂದಿರ ನಿರ್ಮಾಣವಾಗಬೇಕು. ಇದು ಲೋಕಮತದ ಪರಿಷ್ಕಾರವಾಗಬೇಕು ಎಂದು ಹೇಳಿದರು.
ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ವಿಹಿಂಪ ಅಖಿಲ ಭಾರತೀಯ ಪ್ರಧಾನ ಕಾರ್ಯದರ್ಶಿ ಮಿಲಿಂದಜಿ ಪರಾಂಡೆ, ಆರ್ಎಸ್ಎಸ್ನ ಸಹ ಸರಕಾರ್ಯವಾಹ ಮುಕುಂದ ಸಿ ಆರ್., ಆದಿಚುಂಚನಗಿರಿ ಶಾಖಾ ಮಠದ ಶ್ರೀಸೌಮ್ಯನಾಥಾನಂದ ಸ್ವಾಮೀಜಿ, ಬಾಗೇಪಲ್ಲಿಯ ಶ್ರೀಸಿದ್ಧಾನಂದ ಅವಧೂತ ಜೀ, ವಿದ್ಯಾ ಮಹಾಸಂಸ್ಥಾನದ ಸ್ವಾ ಯೋಗಿನಿ ಮಾತಾ, ಮೈಸೂರಿನ ತ್ರಿಪುರಭೈರವಿ ಮಠದ ಶ್ರೀಕೃಷ್ಣ ಮೋಹನಾನಂದಗಿರಿ ಗೋಸ್ವಾಮೀಜಿ ಮಹಾರಾಜ್, ಉಡುಪಿಯ ಬಾಕೂರು ಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತೀ ಸ್ವಾಮೀಜಿ ಹಾಗೂ ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ್ಯದ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ದೇಶಮಾನೆ, ಜಬಲ್ಪುರದ ಶ್ರೀಮಹಾಮಂಡಲೇಶ್ವರ ಅಖಿಲೇಶ್ವರಾನಂದ ಗಿರಿ ಸ್ವಾಮೀಜಿ, ಮಲ್ಲೇಶ್ವರ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಅಭಯ ಚೈತನ್ಯ ಮಹಾರಾಜ್, ಹೃಷಿಕೇಶ ಶಿವಾನಂದ ಆಶ್ರಮದ ಶ್ರೀಸಚ್ಚಿದಾನಂದ ಸ್ವಾಮೀಜಿ, ಹಿಮಾಚಲ ಪ್ರದೇಶ ಶ್ರೀಮಾಧವಾನಂದ ಗಿರಿ ಸ್ವಾಮೀಜಿ, ಶ್ರೀರಂಗಪಟ್ಟಣ ಶಂಕರ ಮಠದ ಶ್ರೀಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ನೆಲಮಂಗಲ ಶಿವಾನಂದಾಶ್ರಮದ ಶ್ರೀರಮಣಾನಂದ ಸ್ವಾಮೀಜಿ, ದೇವಸಂದ್ರ ಶ್ರೀರಾಮಕೃಷ್ಣ ಸೇವಾ ಟ್ರ¸್ಟïನ ಶ್ರೀಚಂದ್ರೇಶಾನಂದ ಜೀ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘ ಚಾಲಕ ವಿ. ನಾಗರಾಜ್, ಸಂಸದ ಪಿ.ಸಿ.ಮೋಹನ್, ಶಾಸಕ ಆರ್. ಅಶೋಕ, ಸುರೇಶ್ ಕುಮಾರ್, ಉದಯ್ ಬಿ. ಗರುಡಾಚಾರ್, ಅರವಿಂದ ಲಿಂಬಾವಳಿ ಸೇರಿದಂತೆ ಬೆಂಗಳೂರಿನ ಶಾಸಕರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರು ಭಾಗವಹಿಸಿದ್ದರು.
ಜನಾಗ್ರಹ ಸಭೆಗೆ ವಿಶ್ವ ಹಿಂದೂ ಪರಿಷತ್ನಿಂದ 25 ಸಾವಿರ ಕುರ್ಚಿಗಳನ್ನು ಹಾಕಿಸಲಾಗಿತ್ತು. ಸಭೆಗೆ ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಕನಕಪುರ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಿಂದ 35 ಸಾವಿರಕ್ಕೂ ಅಕ ಜನರು ಭಾಗವಹಿಸಿದ್ದರು.
Ram mandir,Janagraha sabha